ಇತ್ತಿಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಹೃದಯಘಾತಕ್ಕೆ ಬಲಿಯಾಗುತ್ತಿರುವುದು ನೋವಿನ ಸಂಗತಿಯಾಗಿದೆ.
ಇದೀಗ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ಸಾವನ್ನಪ್ಪಿದ್ದಾರೆ. ಇದು ನಿಜಕ್ಕೂ ಕಿರುತೆರೆಗೆ ತುಂಬಲಾರದ ನಷ್ಟ ಅಂತಾನೇ ಹೇಳಬಹುದು. ಯಾಕಂದ್ರೆ ರಾಕೇಶ್ ಕೆಲವು ರಿಯಾಲಿಟಿ ಶೋಗಳಲ್ಲಿ ತಮ್ಮ ಹಾಸ್ಯದಿಂದಲೇ ಕೋಟ್ಯಾಂತರ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದರು.
ರಾಕೇಶ್ ಪೂಜಾರಿ ಅವರು ಮೂಲತಃ ಉಡುಪಿಯವರು. ಇವರ ತಂದೆ ದಿನಕರ್ ಪೂಜಾರಿ ಹಾಗೂ ತಾಯಿ ಶಾಂಭವಿ. ರಾಕೇಶ್ ಪೂಜಾರಿ ಅವರಿಗೆ ಒಬ್ಬ ತಂಗಿ ಕೂಡ ಇದ್ದಾರೆ. ತಂದೆಯ ಅಗಲಿಕೆಯ ನಂತರ ರಾಕೇಶ್ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿದ್ದರು. ಇವರು ತನ್ನ ತಂಗಿಯ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕೆಂದು ಕನಸು ಕಂಡಿದ್ದರಂತೆ. ಅದರಂತೆ ಸಾಕಷ್ಟು ತಯಾರಿಯನ್ನು ಕೂಡ ನಡೆಸಿದ್ದರು. ಜೀವನದಲ್ಲಿ ಸಾಕಷ್ಟು ಹಿನ್ನಡೆ ಅನಿಭವಿಸಿದ್ದ ರಾಕೇಶ್ ಪೂಜಾರಿಯವರಿಗೆ ಯಶಸ್ಸು ಸಿಕ್ಕಿದ್ದು ಕಾಮಿಡಿ ಕಿಲಾಡಿಗಳು ಸೀಸನ್ 3 ವಿನ್ನರ್ ಆಗುವ ಮೂಲಕ, ಖಾಸಗಿ ವಾಹಿನಿಯಲ್ಲಿ ಪ್ರಸಾವಾಗುತ್ತಿದ್ದ ಹಿಟ್ಲರ್ ಕಲ್ಯಾಣ ಧಾರಾವಹಿಯಲ್ಲಿ ನಟಿಸಿದ್ದರು. ವಿಶ್ವರೂಪ್ ಎಂಬ ಪಾತ್ರಕ್ಕೆ ಜೀವ ತುಂಬಿದ್ದರು. ಇದೀಗ ಮುಗ್ಧ ಮನಸ್ಸಿನ ಹಾಸ್ಯ ಕಲಾವಿದನ ಅಗಲಿಕೆ ಲಕ್ಷಾಂತರ ಜನರ ಮನಸ್ಸನ್ನು ಛಿದ್ರಗೊಳಿಸಿದೆ.
ಕುಟುಂಬಕ್ಕೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡ ಆ ತಾಯಿಗೆ ಬರಸಿಡಿಲು ಬಡಿದಂತಾಗಿದೆ. ರಾಕೇಶ್ ಸಾವಿಗೆ ಕ್ರೇಜಿ ಕ್ವೀನ್ ರಕ್ಷಿತಾ, ಮಾಸ್ಟರ್ ಆನಂದ್, ಶಿವರಾಜ್ ಕೆ ಆರ್ ಪೇಟೆ, ಹಿಟ್ಲರ್ ಕಲ್ಯಾಣ ಖ್ಯಾತಿ ಮಲೈಕಾ ವಸುಪಾಲ್ ಸೇರಿದಂತೆ ಸಾಕಷ್ಟು ಸೆಲೆಬ್ರೇಟಿಗಳು ಕಂಬನಿ ಮಿಡಿದಿದ್ದಾರೆ.
ಸಾವು ಸಂಭವಿಸುವುದಕ್ಕೂ ಮೊದಲು ಏನಾಗಿತ್ತು ಎಂದು ಅವರ ಆಪ್ತ ಹಾಗೂ ನಟ ಗೋವಿಂದೇ ಗೌಡ (ಜಿಜಿ) ವಿವರಿಸಿದ್ದಾರೆ. ರಾಕೇಶ್ ಅವರು ಮೇ 11ರ ಬೆಳಿಗ್ಗೆ ‘ಕಾಂತಾರ: ಚಾಪ್ಟರ್ 1’ ಶೂಟ್ನಲ್ಲಿ ಇದ್ದರು. ಆ ಬಳಿಕ ಸಂಜೆ ಆಪ್ತರೊಬ್ಬರ ಮೆಹಂದಿ ಶಾಸ್ತ್ರಕ್ಕೆ ಹೋಗಿದ್ದಾರೆ. ಮಧ್ಯ ರಾತ್ರಿ ವೇಳೆಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ರಾಕೇಶ್ ಪೂಜಾರಿಯವರು, ಕನ್ನಡದಲ್ಲಿ ಪೈಲ್ವಾನ್, ಇದು ಎಂಥಾ ಲೋಕವಯ್ಯ ಮತ್ತು ತುಳುವಿನಲ್ಲಿ ಪೆಟ್ಕಮ್ಮಿ, ಅಮ್ಮೆರ್ ಪೊಲೀಸ್, ಪಮ್ಮನ್ನೆ ದಿ ಗ್ರೇಟ್, ಉಮಿಲ್ ಮತ್ತು ಇಲ್ಲೋಕ್ಕೆಲ್ ಮುಂತಾದ ನಾಟಕಗಳು, ಸ್ಕಿಟ್‌ಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇಷ್ಟೇ ಅಲ್ಲದೇ ಅವರು ಕರಾವಳಿಯ ರಿಯಾಲಿಟಿ ಶೋಗಳಾದ ಬಲೆ ತೇಲಿಪಾಲೆ, ಮೇ 22, ಸ್ಟಾರ್, ತುಯಿನಾಯೆ ಪೋಯೆ ಇತ್ಯಾದಿ ನಾಟಕದಲ್ಲಿ ಅಭಿನಯಿಸಿದ್ದಾರೆ…


















