ಬೆಂಗಳೂರು : ಹೊಸ ವರ್ಷದ ಸಂಭ್ರಮಕ್ಕೆ ಬೆರಳೆಣಿಕೆ ದಿನಗಳಷ್ಟೇ ಬಾಕಿಯಿದ್ದು, ರಾಜಧಾನಿಯಲ್ಲಿ ನಡೆಯಲಿರುವ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಪೊಲೀಸರು ಸಕಲ ರೀತಿಯ ಸಿದ್ಧತೆ ಕೈಗೊಂಡಿದ್ದಾರೆ. ಅಲ್ಲದೇ ಜವಾಬ್ದಾರಿಯಾಗಿ ಸಂಭ್ರಮ ಆಚರಿಸೋಣ ಎಂಬ ಅಭಿಯಾನ ಕೈಗೊಂಡಿದ್ದಾರೆ.
ಹೊಸ ವರ್ಷಾಚರಣೆಗೆ ಬೆಂಗಳೂರು ನಗರದ ಜನ ತಯಾರಾಗಿದ್ದು, ಪೊಲೀಸರು ಕೂಡ ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ಸಂಭ್ರಮದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಸೂಕ್ತ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆನ್‌ಲೈನ್ ಮೂಲಕ ಜವಾಬ್ದಾರಿಯುತವಾಗಿ ಹೊಸ ವರ್ಷ ಆಚರಿಸಿ ಅಂತಾ ಅಭಿಯಾನ ಆರಂಭಿಸಿರುವ ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಡ್ರಗ್ ಪಾರ್ಟಿ, ರೇವ್ ಪಾರ್ಟಿ ನಿಯಂತ್ರಣಕ್ಕೆ ಮುಂದಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ “ಸೆಲೆಬ್ರೇಟ್ ರೆಸ್ಪಾನ್ಸಿಬಿಲಿ” (Celebrate responsibly) ಅಭಿಯಾನ ಶುರು ಮಾಡಿರುವ ಪೊಲೀಸ್ ಇಲಾಖೆ, ಜನರಿಗೆ ಕೆಲ ಸೂಚನೆಗಳನ್ನು ನೀಡಿದ್ದಾರೆ. ಪ್ರಯಾಣಿಕರ ಸುರಕ್ಷತೆ ಬಗ್ಗೆಯೂ ಅಭಿಯಾನ ಮಾಡಿದ್ದು ಉಬರ್, ಓಲಾ ಟ್ಯಾಕ್ಸಿಗಳಲ್ಲಿನ ತುರ್ತು ತಂತ್ರಜ್ಞಾನದ ಬಗ್ಗೆ ಮಾಹಿತಿ ಹಂಚಿಕೊಳ್ತಿದ್ದಾರೆ. ಇಂದು ಕಮಿಷನರ್ ಕಚೇರಿಯಲ್ಲಿ ಓಲಾ, ಉಬರ್ ಮುಖ್ಯಸ್ಥರ ಜೊತೆ ಸಭೆ ನಡೆಸಿದ ಸೀಮಾಂತ್ ಕುಮಾರ್ ಸಿಂಗ್, ಭದ್ರತೆ ಮತ್ತು ಇನ್ನಿತರ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
QR ಕೋಡ್ ಸ್ಕ್ಯಾನ್ ಮಾಡಿ ದೂರು ಕೊಡಿ |
ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ವ್ಯವಸ್ಥೆಯನ್ನೂ ಪೊಲೀಸ್ ಇಲಾಖೆ ಕಲ್ಪಿಸಿದೆ. ಕ್ಯೂ ಆರ್ ಕೋಡ್ ಪರಿಚಯಿಸಿರುವ ಪೊಲೀಸ್ ಇಲಾಖೆ, ಅವುಗಳನ್ನು ನಗರದಲ್ಲಿ ಓಡಾಡುವ ಓಲಾ, ಊಬರ್ ಕ್ಯಾಬ್, ಆಟೋ, ಬಸ್, ಮೆಟ್ರೋಗಳಲ್ಲಿ ಅಂಟಿಸುತ್ತಿದೆ. ಹೊಸ ವರ್ಷದ ಸಂಭ್ರಮದ ವೇಳೆ ಏನಾದ್ರೂ ಸಮಸ್ಯೆ ಆದ್ರೆ, ಅಹಿತಕರ ಘಟನೆಗಳು ನಡೆದರೆ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಎಲ್ಲ ಡೀಟೆಲ್ಸ್ ಸಿಗುತ್ತೆ. ಇಲ್ಲಿ ದೂರು ಕೂಡ ನೀಡಬಹುದು.
ಗಸ್ತು, ಜಾಗೃತಿ, ಗುಂಪು ನಿಯಂತ್ರಣ ಸೇರಿ ಎಲ್ಲ ರೀತಿಯ ತಯಾರಿಯನ್ನು ಪೊಲೀಸರು ಮಾಡಿಕೊಂಡಿದ್ದಾರೆ. ಬಿಎಂಟಿಸಿ, ಮೆಟ್ರೋ ಸರ್ವಿಸ್, ಫೈರ್ ಎಮರ್ಜೆನ್ಸಿ ಸೇವೆ ಬಗ್ಗೆಯೂ ಪೊಲೀಸ್ ಇಲಾಖೆ ಆಯಾ ಇಲಾಖೆಗಳ ಜೊತೆ ಮಾತುಕತೆ ನಡೆಸಿದೆ.
ಮತ್ತೊಂದೆಡೆ, ಡಿಫ್ರೆಂಟ್ ಪಾರ್ಟಿ ಮೋಡ್ಗೆ ಪ್ಲಾನ್ ಮಾಡಿಕೊಂಡವರಿಗೆ ಪೊಲೀಸ್ ಕಮಿಷನರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಡ್ರಗ್ ಮತ್ತು ರೇವ್ ಪಾರ್ಟಿ ನಡೆಯಲು ಬಿಡಲ್ಲ. ಡ್ರಿಂಕ್ ಆಂಡ್ ಡ್ರೈವ್ ಮಾಡಬಾರದು ಅಂತಾ ವಾರ್ನ್ ಮಾಡಿದ್ದಾರೆ. ಹೆಣ್ಣು ಮಕ್ಕಳ ಸುರಕ್ಷತೆಗೆ ಹೆಚ್ಚು ಒತ್ತು ಕೊಡಲಾಗಿದೆ. ಎಲ್ಲೆಡೆಯೂ ಮಹಿಳೆಯರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪಬ್, ರೆಸ್ಟೋರೆಂಟ್, ಕ್ಯಾಬ್ಗಳು ಸೇರಿ ಎಲ್ಲೆಡೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಇದನ್ನೂ ಓದಿ : ಸಮುದ್ರದಾಳದಲ್ಲಿ ಭರತನಾಟ್ಯ | 14 ವರ್ಷದ ಬಾಲಕಿಯ ವಿಶೇಷ ಸಾಧನೆ



















