ಬೆಂಗಳೂರು : ಬೆಂಗಳೂರು CCB ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 150 ಕೋಟಿಗೂ ಅಧಿಕ ಮೌಲ್ಯದ ಜಮೀನನ್ನು ಅಕ್ರಮವಾಗಿ ಸೇಲ್ ಡೀಡ್ ರಿಜಿಸ್ಟರ್ ಮಾಡಿದ್ದ ಆರೋಪದಡಿ ಸಬ್ ರಿಜಿಸ್ಟರ್ ರೂಪನನ್ನು ಅರೆಸ್ಟ್ ಮಾಡಿದ್ದಾರೆ.
ನಕಲಿ ಸೇಲ್ ಡೀಡ್ ರಿಜಿಸ್ಟರ್ ಮಾಡಿ, ಬೇಗೂರು ಹೋಬಳಿಯ ಬೆರೆಟೇನ ಅಗ್ರಹಾರದ ಸರ್ವೆ ನಂ. 5/2 ರಲ್ಲಿನ 36 ಎಕರೆ 74 ಗುಂಟೆ & 39ಎಕರೆ 65 ಗುಂಟೆ ಜಮೀನನ್ನು ಅಕ್ರಮವಾಗಿ ನೋಂದಣಿ (ರಿಜಿಸ್ಟರ್) ಮಾಡಿದ ಆರೋಪದ ಮೇಲೆ ಬಿಟಿಎಂ ಲೇಔಟ್ ಸಬ್ ರಿಜಿಸ್ಟರ್ ರೂಪನನ್ನು ಬಂಧಿಸಲಾಗಿದೆ. ಅಕ್ರಮವಾಗಿ ನೋಂದಣಿಯಾದ ಈ ಜಮೀನಿನ ಅಂದಾಜು ಮೌಲ್ಯ ₹150 ಕೋಟಿಗೂ ಅಧಿಕವಾಗಿದೆ.

ಬೇಗೂರು ಬಳಿಯಲ್ಲಿರುವ ಒಟ್ಟು 75 ಎಕರೆ ಜಮೀನನ್ನು ಸಬ್ ರಿಜಿಸ್ಟರ್ ರೂಪ ಅಕ್ರಮವಾಗಿ ಸೇಲ್ ಮಾಡಿದ್ದರು. ಈ ಜಮೀನು ಮುಕುಂದರ ತಂದೆ ನಾಗರಾಜ್ ಶೆಟ್ಟಿ ಹೆಸರಿನಲ್ಲಿತ್ತು. ಗಣೇಶ್ ಎನ್.ವೈ ಎಂಬಾತ ನಾಗರಾಜ್ ಶೆಟ್ಟಿ ಪುತ್ರ ಎನ್ನುವಂತೆ ಬಿಂಬಿಸಿ ನಕಲಿ ಸೇಲ್ ಡೀಡ್ ಮಾಡಲಾಗಿತ್ತು. ಅಸಲಿಗೆ ನಾಗರಾಜ್ ಶೆಟ್ಟಿರಿಗೆ ಗಣೇಶ್ ಎನ್.ವೈ ಎಂಬ ಮಗನೇ ಇಲ್ಲ, ನಾಗರಾಜ್ ಶೆಟ್ಟಿಯವರ ಪುತ್ರ ಮುಕುಂದ.
ನಾಗರಾಜ್ ಶೆಟ್ಟಿ ಅವರ ಆಸ್ತಿಯನ್ನು ನಕಲಿ ದಾಖಲೆಗಳ ಮೂಲಕ ಒಂದು ಟ್ರಸ್ಟ್‌ಗೆ ವರ್ಗಾಯಿಸಲು ಮುಂದಾದಾಗ ಈ ಬೃಹತ್ ಅಕ್ರಮ ಬಯಲಾಗಿದೆ. ಈ ಬಗ್ಗೆ ಜಮೀನಿನ ಮಾಲೀಕ ಮುಕುಂದ ಅವರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಪ್ರಕರಣದ ಗಂಭೀರತೆ ಪರಿಗಣಿಸಿ ತನಿಖೆಯನ್ನು ಸಿಸಿಬಿ ಪೊಲೀಸರಿಗೆ ವರ್ಗಾಯಿಸಲಾಯಿತು. ಸಬ್ ರಿಜಿಸ್ಟರ್ ಕುಮಾರಿ ಹಾಗೂ ನವೀನ್ ಎಂಬಾತನನ್ನು ಬಂಧಿಸಲಾಗಿತ್ತು, ಸದ್ಯ ಸಬ್ ರಿಜಿಸ್ಟರ್ ರೂಪನನ್ನು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೋಜು ಮಸ್ತಿ | ನಾಲ್ವರು ವಿಚಾರಣಾಧೀನ ಕೈದಿಗಳ ವಿರುದ್ಧ ಪ್ರಕರಣ ದಾಖಲು!



















