ಬೆಂಗಳೂರು : ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ಜಾಲದ ವಿರುದ್ಧ ಸಿಸಿಬಿ ಪೊಲೀಸರು ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿದ್ದಾರೆ. 18 ದಿನಗಳ ಅವಧಿಯಲ್ಲಿ ಒಟ್ಟು 272 ಅಕ್ರಮ ಬಾಂಗ್ಲಾ ವಲಸಿಗರನ್ನು ಗುರುತಿಸಿ ಅವರನ್ನ ಗಡಿಪಾರು ಮಾಡಲಾಗಿದೆ.
ಈ ಕಾರ್ಯಾಚರಣೆಯಲ್ಲಿ 178 ಪುರುಷರು, 94 ಮಹಿಳೆಯರು ಹಾಗೂ 12 ಮಕ್ಕಳು ಸೇರಿದ್ದಾರೆ. ಇವರನ್ನ ಬಿಎಸ್‌ಎಫ್ ಸಹಾಯದಿಂದ ತ್ರಿಪುರ ಗಡಿಯ ಮೂಲಕ ದೇಶದಿಂದ ಹೊರಗೆ ಕಳುಹಿಸಲಾಗಿದೆ. ಈ ಕ್ರಮಕ್ಕೆ ಕಾರಣವಾಗಿ ದೇಶದ ಭದ್ರತೆ ದೃಷ್ಟಿಯಿಂದ ಕೇಂದ್ರದ ನಿರ್ದೇಶನಗಳ ಬಳಿಕ ದೇಶಾದ್ಯಂತ ಆರಂಭವಾದ ವಿಶೇಷ ಕಾರ್ಯಾಚರಣೆ ಎನ್ನಲಾಗಿದೆ.
ಇದೇ ಸಂದರ್ಭದಲ್ಲಿ ಅಕ್ರಮ ವಲಸೆ ನಡೆಸುತ್ತಿದ್ದ “ಟೇಕೆದಾರ” ಎಂಬ ಏಜೆಂಟ್‌ಗಳ ಜಾಲವನ್ನೂ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಟೇಕೆದಾರರು ಮೂರು ಹಂತಗಳಲ್ಲಿ ಕೆಲಸ ಮಾಡುತ್ತಿದ್ದರು. ಮೊದಲು ಬಾಂಗ್ಲಾದೇಶದಿಂದ ಗಡಿಯವರೆಗೆ ವ್ಯಕ್ತಿಗಳನ್ನು ಕರೆತರುವುದು, ನಂತರ ಅವರನ್ನು ಅಕ್ರಮವಾಗಿ ಭಾರತ ಗಡಿ ದಾಟಿಸುವುದು, ಕೊನೆಗೆ ದೇಶದೊಳಗೆ ಕೆಲಸ ಹಾಗೂ ವಾಸದ ವ್ಯವಸ್ಥೆ ಮಾಡುವುದು ಇವರ ಕಾರ್ಯವಾಗಿತ್ತು.
ಪ್ರತಿ ವ್ಯಕ್ತಿಯಿಂದ ಸುಮಾರು 25,000 ರೂ. ವರೆಗೆ ಹಣ ವಸೂಲಿ ಮಾಡಲಾಗುತ್ತಿತ್ತು. ಬಳಿಕ ಭಾರತದಲ್ಲಿ ಕೆಲಸ ಕೊಡಿಸುವ ಟೇಕೆದಾರರು ತಿಂಗಳಿಗೆ 500 ರೂ. ರಿಂದ 1000ರೂ. ವರೆಗೆ ಕಮಿಷನ್ ಪಡೆಯುತ್ತಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಈ ಪ್ರಕರಣದಲ್ಲಿ ಈಗಾಗಲೇ ಇಬ್ಬರು ಟೇಕೆದಾರರನ್ನು ಬಂಧಿಸಲಾಗಿದ್ದು, ಅವರಿಂದ ಇನ್ನಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಜಾಲದ ಹಿಂದೆ ಇನ್ನೂ ಹೆಚ್ಚಿನವರ ಸಂಪರ್ಕವಿರುವ ಸಾಧ್ಯತೆಯಿರುವುದರಿಂದ ಪೊಲೀಸರು ತನಿಖೆಯನ್ನು ವಿಸ್ತರಿಸಿದ್ದಾರೆ.


















