ಬೆಂಗಳೂರು : ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಬೆಂಗಳೂರಲ್ಲಿ ಮಾರಾಟ ಮಾಡಲು ಶೇಖರಿಸಿಟ್ಟಿದ್ದ 28.75 ಕೋಟಿ ಮೌಲ್ಯದ ವಿವಿಧ ಮಾದಕ ಪದಾರ್ಥಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರತ್ಯೇಕ ಮೂರು ಪ್ರಕರಣಗಳಲ್ಲಿ 10.369 ಕೆ.ಜಿ ಎಂಡಿಎಂಎ ಹಾಗೂ 8 ಕೆ.ಜಿ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ತಾಂಜಾನಿಯಾ ಮೂಲದ ನ್ಯಾನ್ಸಿ ಒಮಾರಿಲಾವಾ ಹಾಗೂ ನೈಜೀರಿಯಾ ಮೂಲದ ಎಮ್ಯುನಲ್ ಅರೆಂಜಿ ಇಡಿಕೋ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
2023ರಲ್ಲಿ ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಬಂದಿದ್ದ ನ್ಯಾನ್ಸಿ, ನಂತರ ಬೆಂಗಳೂರಿನ ಸಂಪಿಗೆಹಳ್ಳಿಯ ಪಿ & ಟಿ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದುಕೊಂಡು ಹೇರ್ ಡಿಸೈನ್ ಕೆಲಸ ಮಾಡಿಕೊಂಡಿದ್ದಳು. ದೆಹಲಿ ಮತ್ತಿತರೆ ಕಡೆಗಳಿಂದ ಎಂಡಿಎಂಎ ಕ್ರಿಸ್ಟೆಲ್ಸ್ ಖರೀದಿಸಿ ತರುತ್ತಿದ್ದ ಆರೋಪಿ, ಅವುಗಳನ್ನು ಪರಿಚಯಸ್ಥ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಳು. ಸದ್ಯ ಆಕೆಯ ಬಳಿಯಿದ್ದ ಅಂದಾಜು 18.50 ಕೋಟಿ ಮೌಲ್ಯದ 9 ಕೆ.ಜಿ 254 ಗ್ರಾಂ ಎಂಡಿಎಂಎ ಕ್ರಿಸ್ಟೆಲ್ ಹಾಗೂ ಕೃತ್ಯಕ್ಕೆ ಬಳಸಲಾಗಿದ್ದ ಮೊಬೈಲ್ ಫೋನ್ ಮತ್ತಿತರೆ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬ್ಯುಸಿನೆಸ್ ವೀಸಾ ಪಡೆದು ದೆಹಲಿಗೆ ಬಂದಿದ್ದ ಆರೋಪಿ :
ಲಾಲ್‌ಬಾಗ್ ಸೌತ್ ಗೇಟ್‌ನ ಬಾಸ್ಕೆಟ್ ಬಾಲ್ ಕೋರ್ಟ್ ಬಳಿ ಡ್ರಗ್ ಪೆಡ್ಲಿಂಗ್ ಮಾಡಲು ಯತ್ನಿಸುತ್ತಿದ್ದ ಎಮ್ಯುನಲ್ ಅರೆಂಜಿ ಇಡಿಕೋನನ್ನು ಬಂಧಿಸಲಾಗಿದೆ. 2021ರಲ್ಲಿ ಬ್ಯುಸಿನೆಸ್ ವೀಸಾ ಪಡೆದು ದೆಹಲಿಗೆ ಬಂದಿದ್ದ ಆರೋಪಿ, ನಂತರ 2022ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿದ್ದ. ದೆಹಲಿ, ಗೋವಾದಲ್ಲಿ ವಿದೇಶಿ ಡ್ರಗ್ ಪೆಡ್ಲರ್‌ಗಳಿಂದ ಎಂಡಿಎಂಎ ಕ್ರಿಸ್ಟೆಲ್‌ನ್ನ ಕಡಿಮೆ ಬೆಲೆಗೆ ಖರೀದಿಸಿ ತಂದು ಬೆಂಗಳೂರಿನಲ್ಲಿ ಮತ್ತೋರ್ವ ವಿದೇಶಿ ಪ್ರಜೆಯ ಮೂಲಕ ಮಾರಾಟ ಮಾಡಿಸುತ್ತಿದ್ದ. ಸದ್ಯ ಆತನ ವಶದಲ್ಲಿದ್ದ ಅಂದಾಜು 2.25 ಕೋಟಿ ಮೌಲ್ಯದ 1 ಕೆ.ಜಿ 115 ಗ್ರಾಂ ಎಂಡಿಎಂಎ ಕ್ರಿಸ್ಟೆಲ್ ಹಾಗೂ ಕೃತ್ಯಕ್ಕೆ ಬಳಸಲಾಗುತ್ತಿದ್ದ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ವಿರುದ್ಧ 2024ರ ಫೆಬ್ರವರಿ ತಿಂಗಳಿನಲ್ಲಿ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು .
ಫಾರಿನ್ ಪೋಸ್ಟ್ ಆಫೀಸ್‌ಗೆ ತಲುಪಿದ್ದ ನಿಷೇಧಿತ ಮಾದಕ ವಸ್ತುಗಳಿರುವ ಪಾರ್ಸೆಲ್‌ಗಳನ್ನ ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ. ಅಂದಾಜು 8 ಕೋಟಿ ಮೌಲ್ಯದ 8 ಕೆ.ಜಿ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ವಿದೇಶಿ ಮೂಲಗಳಿಂದ ಹೈಡ್ರೋ ಗಾಂಜಾವನ್ನು ಖರೀದಿಸಿ ಅವುಗಳನ್ನು ವ್ಯವಸ್ಥಿತವಾಗಿ ಪ್ಯಾಕ್ ಮಾಡಿ ಬೆಂಗಳೂರಿಗೆ ತರಿಸಿಕೊಂಡಿರುವುದು ಪತ್ತೆಯಾಗಿದ್ದು, ಆರ್ಡರ್ ಮಾಡಿದ್ದವರ ವಿವರ ಕಲೆಹಾಕಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : IND vs SA 2nd ODI | ಟಾಸ್ ಗೆದ್ದ ಸೌತ್ ಆಫ್ರಿಕಾ ಬೌಲಿಂಗ್ ಆಯ್ಕೆ!



















