ಬೆಂಗಳೂರು : ಡ್ರಗ್ಸ್ ಮಾರಾಟ ಮಾಡುತ್ತಿದ್ದ ಅಡ್ಡೆಗಳ ಮೇಲೆ ಕಾರ್ಯಾಚರಣೆ ನಡೆಸಿ 5.50 ಕೋಟಿ ರೂ ಮೌಲ್ಯದ ಡ್ರಗ್ಸ್ ಅನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರಕ್ಕೆ ಡ್ರಗ್ಸ್ ತರಿಸಿಕೊಂಡು ದಂಧೆ ನಡೆಸುತ್ತಿದ್ದ ಇಬ್ಬರನ್ನು ಬಂಧಿಸಿ, 1.47 ಕೋಟಿ ಮೌಲ್ಯದ ಎಂಡಿಎಂಎ ವಶಕ್ಕೆ ಪಡೆದುಕೊಂಡರೆ, ಮತ್ತೊಂದು ಪ್ರಕರಣದಲ್ಲಿ ನಗರದಲ್ಲಿರುವ ವಿದೇಶಿ ಅಂಚೆ ಕಚೇರಿಗೆ ಚಾಕೊಲೇಟ್ ಹಾಗೂ ಬಿಸ್ಕತ್ ಪ್ಯಾಕೇಟ್ಗಳಲ್ಲಿ ಬಂದಿದ್ದ ಮೂರು ಕೋಟಿ ಮೌಲ್ಯದ ಹೈಡ್ರೊ ಗಾಂಜವನ್ನು ಜಪ್ತಿ ಮಾಡಿದ್ದಾರೆ.

ದೆಹಲಿಯಿಂದ ರಾಜಧಾನಿಗೆ ನಿಷೇಧಿತ ಎಂಡಿಎಂಎ ಅನ್ನು ತರಿಸಿಕೊಂಡು ಡ್ರಗ್ಸ್ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ನೈಜೀರಿಯಾದ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಡುರೊ ಮಿಶೆಲ್ ಹಾಗೂ ಇಬು ಸ್ಯಾಮುಯೆಲ್ ಬಂಧಿತರು. ಇವರಿಂದ 1.47 ಕೆ.ಜಿ ಎಂಡಿಎಂಎ ಕ್ರಿಸ್ಟೆಲ್ ವಶಪಡಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಿಸ್ನೆಸ್ ವೀಸಾದಡಿ 2017ರಲ್ಲಿ ಭಾರತಕ್ಕೆ ಬಂದಿದ್ದ ಆರೋಪಿಗಳು ನಗರದ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದರು. ಆರಂಭದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದು, ತಮಿಳುನಾಡಿನಿಂದ ಬಟ್ಟೆ ಖರೀದಿಸಿ ನೈಜೀರಿಯಾಗೆ ರಪ್ತು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸುಲಭವಾಗಿ ಹಣ ಸಂಪಾದನೆ ಮಾಡಲು ಅಡ್ಡ ದಾರಿ ಹಿಡಿದು, ದೆಹಲಿಯಿಂದ ಲಗೇಜ್ಗಳ ಮುಖಾಂತರ ಡ್ರಗ್ಸ್ ತರಿಸಿಕೊಳ್ಳುತ್ತಿದ್ದರು. ಬಳಿಕ ನಗರದ ಕಾಲೇಜುಗಳ ಮುಂದೆ ಡ್ರಗ್ಸ್ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು. ಆರೋಪಿಗಳ ವಿರುದ್ದ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೆ.ಜಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವಿದೇಶಿ ಅಂಚೆ ಕಚೇರಿಗೆ ಥೈಲ್ಯಾಂಡ್ನಿಂದ ಬಂದಿದ್ದ ಅನುಮಾನಾಸ್ಪಾದ ಪಾರ್ಸೆಲ್ನಲ್ಲಿದ್ದ 3 ಕೋಟಿ ಮೌಲ್ಯದ 3 ಕೆ.ಜಿ. ಹೈಡ್ರೊಗಾಂಜಾವನ್ನು ಸಿಸಿಬಿ ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದೆ.
ಅಂಚೆ ಕಚೇರಿಗೆ ವಿದೇಶದಿಂದ ಅನುಮಾನ್ಪಾಸದ ಪಾರ್ಸೆಲ್ ಬರುತ್ತಿರುವುದಾಗಿ ಕಸ್ಟಮ್ ಇಲಾಖೆಯ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಸಿಕ್ಕಿದೆ. ವಿದೇಶಿ ಕಂಪೆನಿಗಳ ಬಿಸ್ಕತ್, ಚಾಕೊಲೇಟ್ ಪ್ಯಾಕೇಟ್ಗಳಲ್ಲಿ ಡ್ರಗ್ಸ್ ಮರೆಮಾಚಿ ಅಪರಿಚಿತ ಆರೋಪಿಗಳು ನಗರಕ್ಕೆ ತರಿಸಿಕೊಂಡಿದ್ದರು. ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಪ್ರಕರಣ ದಾಖಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.