ನವದೆಹಲಿ: ದೇಶಾದ್ಯಂತ ಭಾರೀ ಸಂಚಲನಕ್ಕೆ ಕಾರಣವಾಗಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್(Sushant Singh Rajput) ಅವರ ಸಾವಿನ ಪ್ರಕರಣ ಕುರಿತು ತನಿಖೆ ನಡೆಸಿದ್ದ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಈಗ ನ್ಯಾಯಾಲಯಕ್ಕೆ ಮುಕ್ತಾಯ ವರದಿಯನ್ನು ಸಲ್ಲಿಸಿದ್ದು, ಸುಶಾಂತ್ ಗೆಳತಿ, ನಟಿ ರಿಯಾ ಚಕ್ರವರ್ತಿಯವರಿಗೆ ಕ್ಲೀನ್ ಚಿಟ್ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಸುಶಾಂತ್ ಸಿಂಗ್ ಅವರು ಮೃತಪಟ್ಟ (ಜೂನ್ 14, 2020) ಐದು ವರ್ಷಗಳ ನಂತರ ಮುಕ್ತಾಯ ವರದಿ ಸಲ್ಲಿಕೆಯಾಗಿದೆ. ಸುಶಾಂತ್ ರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂದು ಅವರ ಕುಟುಂಬ ಸದಸ್ಯರು ಆರೋಪಿಸಿದ್ದರು. ಆದರೆ, ತನಿಖೆ ಮುಕ್ತಾಯಗೊಳಿಸಿರುವ ಸಿಬಿಐ, ಸುಶಾಂತ್‌ರದ್ದು ಆತ್ಮಹತ್ಯೆಯೇ ಹೊರತು ಕೊಲೆಯಲ್ಲ ಎಂದಿದೆ.
“ಇದು ಕೊಲೆ ಪ್ರಕರಣ ಎಂಬುದಕ್ಕೆ ಯಾವುದೇ ಮೌಖಿಕ ಅಥವಾ ಭೌತಿಕ ಸಾಕ್ಷ್ಯಗಳು ಇಲ್ಲ. ಸುಶಾಂತ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದು ಅವರ ಸಹೋದರಿ. ಅವರನ್ನು ವಿಚಾರಣೆಗೆ ಒಳಪಡಿಸಲು ನಾವು ಇಷ್ಟು ದಿನ ಕಾಯಬೇಕಾಯಿತು. ಆದರೆ ಅವರು ನ್ಯಾಯಾಲಯದ ಮುಂದೆ ಹಾಜರಾಗಲೇ ಇಲ್ಲ” ಎಂದು ಪ್ರಕರಣದ ಮೇಲ್ವಿಚಾರಣೆ ವಹಿಸಿದ್ದ ಸಿಬಿಐನ ಮಾಜಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವೈಜ್ಞಾನಿಕ ಪುರಾವೆಗಳು ಕೂಡ ಸುಶಾಂತ್ ಸಿಂಗ್ ರಜಪೂತ್ ಅವರದ್ದು ಕೊಲೆ ಎಂಬುದನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿವೆ. ಹೀಗಾಗಿ ಅದು ಆತ್ಮಹತ್ಯೆ ಎನ್ನುವುದು ಸ್ಪಷ್ಟ. ಆದ್ದರಿಂದ ಮುಕ್ತಾಯ ವರದಿಯನ್ನು ಸಲ್ಲಿಸುವ ನಿರ್ಧಾರವನ್ನು ಅಂತಿಮವಾಗಿ ಕೈಗೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ರಿಯಾ ಚಕ್ರವರ್ತಿ ಪರ ವಕೀಲರು ಹೇಳಿದ್ದೇನು?
ನಟನ ಸಾವಿನ ಪ್ರಕರಣದ ಮುಕ್ತಾಯ ವರದಿ ಕುರಿತು ಪ್ರತಿಕ್ರಿಯಿಸಿದ ಬಾಂಬೆ ಹೈಕೋರ್ಟ್‌ನ ಹಿರಿಯ ವಕೀಲ ಸತೀಶ್ ಮನೇಶಿಂಧೆ ಅವರು, “ಪ್ರಕರಣದ ಪ್ರತಿಯೊಂದು ಅಂಶವನ್ನು ಎಲ್ಲಾ ಕೋನಗಳಿಂದಲೂ ಕೂಲಂಕಷವಾಗಿ ತನಿಖೆ ಮಾಡಿ ಪ್ರಕರಣವನ್ನು ಮುಕ್ತಾಯಗೊಳಿಸಿದ್ದಕ್ಕಾಗಿ ಸಿಬಿಐಗೆ ಧನ್ಯವಾದಗಳು” ಎಂದಿದ್ದಾರೆ. “ಪ್ರಕರಣ ಕುರಿತು ಸಾಮಾಜಿಕ ಮಾಧ್ಯಮಗಳು ಮತ್ತು ವಿದ್ಯುನ್ಮಾನ ಮಾಧ್ಯಮಗಳು ಸುಖಾಸುಮ್ಮನೆ ಆರೋಪಗಳನ್ನು, ಹುಸಿ ನಿರೂಪಣೆಗಳನ್ನು ಮಾಡಿದ್ದವು. ನ್ಯಾಯಮೂರ್ತಿ ಸಾರಂಗ್ ವಿ ಕೊತ್ವಾಲ್ ಅವರು ಜಾಮೀನು ಮಂಜೂರು ಮಾಡುವವರೆಗೂ ನನ್ನ ಕಕ್ಷಿದಾರಳಾದ ರಿಯಾ ಚಕ್ರವರ್ತಿ ಯಾವುದೇ ತಪ್ಪು ಮಾಡದೇ 27 ದಿನಗಳ ಕಾಲ ಜೈಲಿನಲ್ಲಿದ್ದರು. ಆಕೆ ಅನುಭವಿಸಿರುವ ನೋವನ್ನು ಯಾರಿಗೂ ವಿವರಿಸಲಾಗದು. ಎಲ್ಲ ರೀತಿಯ ಅವಮಾನಗಳನ್ನು, ಅಮಾನವೀಯ ದಾಳಿಗಳನ್ನು ಮೌನವಾಗಿ ಸಹಿಸಿಕೊಂಡ ರಿಯಾ ಮತ್ತು ಅವರ ಕುಟುಂಬಕ್ಕೆ ನಾನು ಸೆಲ್ಯೂಟ್ ಹೊಡೆಯಬಯಸುತ್ತೇನೆ” ಎಂದಿದ್ದಾರೆ.
ರಿಯಾ ಅವರು ಸುಶಾಂತ್‌ರ ಗೆಳತಿಯಾಗಿದ್ದರು. ಸುಶಾಂತ್ ಸಾವಿನ ಬೆನ್ನಲ್ಲೇ ಅವರ ಕುಟುಂಬ ಸದಸ್ಯರು ರಿಯಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿದ್ದರು. ಜೊತೆಗೆ, ಮಾದಕವಸ್ತು ಸಂಬಂಧಿತ ಪ್ರಕರಣದಲ್ಲಿ ರಿಯಾ ಅವರನ್ನು ಸೆಪ್ಟೆಂಬರ್ 2020 ರಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಬಂಧಿಸಿತ್ತು. ಇದರಿಂದಾಗಿ 27 ದಿನಗಳ ಕಾಲ ಅವರು ಜೈಲಿನಲ್ಲಿ ಕಳೆಯಬೇಕಾಯಿತು.
ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ
ಜೂನ್ 14, 2020ರಂದು ಸುಶಾಂತ್ ಸಿಂಗ್ ರಜಪೂತ್ ಮುಂಬೈನ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಸೀಲಿಂಗ್ ಫ್ಯಾನ್ ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಆದರೆ ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಸಿಕ್ಕಿರಲಿಲ್ಲ. ಈ ಪ್ರಕರಣವು ರಾಷ್ಟ್ರವ್ಯಾಪಿ ಭಾರೀ ಚರ್ಚೆಗೆ ಗ್ರಾಸವಾಗಿ, ಯುವ ನಟನನ್ನು ಕೊಲೆಗೈಯ್ಯಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಅಲ್ಲದೇ, ಸಾವಿಗೂ ಮುನ್ನ ಸುಶಾಂತ್ ಗೂಗಲ್ ನಲ್ಲಿ “ಸ್ಕಿಜೋಫ್ರೇನಿಯಾ”, “ಬೈಪೋಲಾರ್ ಡಿಸಾರ್ಡರ್” ಮತ್ತು “ನೋವುರಹಿತ ಸಾವು” ಕುರಿತ ಮಾಹಿತಿಗಾಗಿ ಹುಡುಕಿದ್ದರೂ ಎಂಬ ವಿಚಾರ ತನಿಖೆ ವೇಳೆ ತಿಳಿದುಬಂದಿತ್ತು.