ಬೆಂಗಳೂರು: ಕ್ಲೌಡ್ ಕಂಪ್ಯೂಟಿಂಗ್ ಸಂಸ್ಥೆ “ಅನಾಥ ಬೆಕ್ಕುಗಳ ಆಶ್ರಯ ಮತ್ತು ದತ್ತು ಕೇಂದ್ರ” ತೆರೆಯಲು ಪ್ರಾಣಾ ಅನಿಮಲ್ ಫೌಂಡೇಶನ್ ನೊಂದಿಗೆ ಕೈಜೋಡಿಸಿದೆ.
ಕನಕಪುರ ರಸ್ತೆಯಲ್ಲಿರುವ ಈ ಕೇಂದ್ರ ಅನಾಥ, ಗಾಯಗೊಂಡ, ರಕ್ಷಿಸಲ್ಪಟ್ಟ ಮತ್ತು ದಿಕ್ಕು ದೆಸೆಯಿಲ್ಲದ ಬೆಕ್ಕುಗಳಿಗೆ ಸಮಗ್ರ ಆರೈಕೆ ನೀಡುತ್ತದೆ. ಇಲ್ಲಿ ಬೆಕ್ಕುಗಳಿಗೆ ಆರೈಕೆಯ ಜೊತೆಗೆ ಚಿಕಿತ್ಸೆ, ಶಸ್ತ್ರಚಿಕಿತ್ಸೆಯನ್ನೂ ನೀಡುತ್ತದೆ. ಅಲ್ಲದೇ, ಆಶ್ರಯ ಮತ್ತು ದತ್ತು ಪಡೆಯುವ ಕ್ರಿಯೆಗಳನ್ನು ಕೂಡ ಹಮ್ಮಿಕೊಳ್ಳಲಿದೆ.

ಈ ವಿಷಯವಾಗಿ ಮಾತನಾಡಿರುವ ಟೆಕಿಯಾನ್ ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ರಾಣಾ ರಾಬಿಲಾರ್ಡ್, ಬೆಂಗಳೂರಿನಲ್ಲಿ ವಾಸಿಸುತ್ತಿರುವ ಅತಿ ಹೆಚ್ಚು ಬೆಕ್ಕುಗಳು ದುರ್ಬಲವಾಗಿವೆ. ಬೆಕ್ಕುಗಳ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಪ್ರಾಣಾ ಅನಿಮಲ್ ಫೌಂಡೇಶನ್‌ನೊಂದಿಗೆ ಕೈ ಜೋಡಿಸಿದ್ದೇವೆ. ಈ ಕೇಂದ್ರವು ಅಗತ್ಯ ಆರೈಕೆ ಮಾತ್ರವಲ್ಲದೆ, ಪ್ರಾಣಿ ಕಲ್ಯಾಣ ಮತ್ತು ಸಾಕು ಪ್ರಾಣಿಗಳ ಜವಾಬ್ದಾರಿಯುತ ಮಾಲೀಕತ್ವದ ಬಗ್ಗೆ ಜಾಗೃತಿ ಮೂಡಿಸುತ್ತದೆ ಎಂದಿದ್ದಾರೆ.
ನಟಿ ಹಾಗೂ ಪ್ರಾಣಾ ಅನಿಮಲ್ ಫೌಂಡೇಶನ್ ನ ಸಂಸ್ಥಾಪಕಿ ಸಂಯುಕ್ತಾ ಹೊರ್ನಾಡ್ ಮಾತನಾಡಿ, ಕೇಂದ್ರದಲ್ಲಿ ಅಪಘಾತದಿಂದ ಅಥವಾ ಗಾಯಗೊಂಡ ಬೆಕ್ಕುಗಳಿಗೆ ಆರೈಕೆ ಸೌಲಭ್ಯಗಳಿವೆ. ಬೆಕ್ಕುಗಳ ಶಾಶ್ವತ ಜೀವನಕ್ಕಾಗಿ ನಿಯಮಿತವಾಗಿ ದತ್ತು ಸ್ವೀಕಾರ ಕ್ರಿಯೆ ನಡೆಸಲಾಗುತ್ತದೆ ಎಂದಿದ್ದಾರೆ.