ಬೆಂಗಳೂರು : ಸೆಪ್ಟೆಂಬರ್ 22 ರಿಂದ ಜಾತಿ ಸಮೀಕ್ಷೆ ಆರಂಭವಾಗುವ ಹಿನ್ನಲೆಯಲ್ಲಿ ಸಮೀಕ್ಷೆಗೆ ಶಿಕ್ಷಕರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ಸೆ. 22ರಿಂದ ಅ.7 ರ ವರೆಗೂ ಜಾತಿ ಸಮೀಕ್ಷೆ ನಡೆಯಲಿದೆ.
ಜಾತಿ ಗಣತಿಯ ಮರು ಸಮೀಕ್ಷೆ ಇರುವ ಕಾರಣದಿಂದ ಈ ಬಾರಿ ದಸರಾ ರಜೆ ಸರ್ಕಾರಿ ಶಾಲಾ ಶಿಕ್ಷಕರಿಗಿಲ್ಲ. ಸಮೀಕ್ಷೆಗೆ ಭಾಗವಹಿಸುವ ಶಿಕ್ಷಕರಿಗೆ ಗಳಿಕೆ ರಜೆಯೂ ನೀಡದಂತೆ ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಸರ್ಕಾರದ ಈ ನಡೆಗೆ ಶಿಕ್ಷಕರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸಮೀಕ್ಷೆಗಾಗಿ ರಾಜ್ಯ ಸರ್ಕಾರ 1.70 ಲಕ್ಷ ಶಿಕ್ಷಕರನ್ನು ಬಳಸಿಕೊಳ್ಳಲು ಮುಂದಾಗಿದೆ. ಸಮೀಕ್ಷೆಯಲ್ಲಿ ಹೇಗೆ ಭಾಗಿಯಾಗಬೇಕು ಎನ್ನುವುದನ್ನು ಈಗಾಗಲೇ ತರಬೇತಿ ನೀಡಲಾಗಿದೆ. ಸೆ.19ರವರೆಗೂ ರಾಜ್ಯ ಸರ್ಕಾರ ಶಿಕ್ಷಕರಿಗೆ ಸಮೀಕ್ಷೆಯ ಕಾರ್ಯಾಚರಣೆಯ ಬಗ್ಗೆ ತರಬೇತಿ ನೀಡುವುದಕ್ಕೆ ನಿರ್ಧಾರ ಮಾಡಿದ್ದಾರೆ. ರಜಾ ದಿನಗಳಲ್ಲಿ ಕೆಲಸ ಮಾಡಿದರೆ ಗಳಿಕಾ ರಜೆ ಸೌಲಭ್ಯ ನೀಡಬೇಕೆಂಬ ನಿಯಮವಿದೆ. ಹೀಗಿದ್ದರೂ ಸಮೀಕ್ಷೆಯಲ್ಲಿ ಭಾಗಿಯಾದ ಶಿಕ್ಷಕರಿಗೆ ಗಳಿಕೆ ರಜೆಯೂ ಲಭ್ಯವಾಗುತ್ತಿಲ್ಲ. ರಾಜ್ಯದಲ್ಲಿ 46,757 ಸರ್ಕಾರಿ ಶಾಲೆಗಳಿದ್ದು, 1.77 ಲಕ್ಷ ಶಿಕ್ಷಕರ ಕಾರ್ಯ ನಿರ್ವಹಿಸುತ್ತಿದ್ದಾರೆ. 2025-26 ರಲ್ಲಿ 123 ರಜೆಗಳಿದ್ದು, 242 ಶಾಲಾ ಕರ್ತವ್ಯ ದಿನಗಳಿವೆ.