ಬೈಂದೂರು : ರಾಜ್ಯದಲ್ಲಿ ಜಾತಿ ಗಣತಿಯನ್ನು ವೈಜ್ಞಾನಿಕವಾಗಿ ಮಾಡಿಲ್ಲ, ಸಮೀಕ್ಷಾಕಾರರು ಮನೆಮನೆಗೆ ಭೇಟಿ ಕೊಟ್ಟಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ಮತ್ತೊಮ್ಮೆ ಜಾತಿ ಸಮೀಕ್ಷೆ ಮಾಡುವುದಕ್ಕೆ ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಕಿರಿಮಂಜೇಶ್ವರ – ನಾಗೂರು ದೇವಾಡಿಗ ಸಂಘದಿಂದ ಶಾಂತೇರಿ ಕಾಮಾಕ್ಷಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಮುಂದೆ ನಡೆಯಲಿರುವ ಜನಗಣತಿಯಲ್ಲಿ ಎಲ್ಲರೂ “ದೇವಾಡಿಗ” ಎಂದೇ ನಮೂದಿಸಬೇಕು ಎಂದು ಸೂಚನೆ ನೀಡಲಾಯಿತು.
ರಾಜ್ಯ ಸರ್ಕಾರದಿಂದ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರ ತನಕ ನಡೆಯಲಿರುವ ಜಾತಿವಾರು ಜನಸಂಖ್ಯಾಗಣತಿ ಮರು ಸಮೀಕ್ಷೆಯಲ್ಲಿ ದೇವಾಡಿಗರೆಲ್ಲರೂ ಗಣತಿ ನಮೂನೆಯಲ್ಲಿ ಜಾತಿ ಕಲಂನಲ್ಲಿ ದೇವಾಡಿಗ ಎಂದೇ ನಮೂದಿಸಬೇಕು ಎಂದು ಬೈಂದೂರು ತಾಲೂಕಿನ ನಾಗೂರು ದೇವಾಡಿಗ ಸಂಘದ ವತಿಯಿಂದ ತಿಳಿಸಲಾಗಿದೆ.
ದೇವಾಡಿಗ ಸಮುದಾಯದ ಉಪಜಾತಿಗಳಾದ ಸೇರಿಗಾರ, ಶೇರಿಗಾರ, ದೇವಲ್ಲಿ, ಸರ್ವೆಗಾರ್, ಸಫಲಿಗ, ಮೊಯಿಲಿ, ಬಂಡಾರಿ, ಅಲ್ಲದೆ ಉಪನಾಮ ಬಲಿ/ಗೋತ್ರ/ಊರು ಆಧಾರಿತ ಗಳನ್ನು ನಮೂದಿಸದೇ ಎಲ್ಲರೂ ʼದೇವಾಡಿಗʼ ಎಂದೇ ನಮೂದಿಸುವಂತೆ ತಿಳಿಸಲಾಗಿದೆ. ಈ ಹಿಂದಿನ ಜನಗಣತಿಯಲ್ಲಿನ ತಪ್ಪುಗಳನ್ನು ಸರಿಪಡಿಸುವ ಸುವರ್ಣಾವಕಾಶವನ್ನು ಸಮುದಾಯ ಸದುಪಯೋಗಪಡಿಸಿಕೊಳ್ಳಬೇಕಿದೆ. ದೇವಾಡಿಗ ಸಮಾಜದ ನಿಖರವಾದ ಜನಸಂಖ್ಯೆಯನ್ನು ಸೂಕ್ತವಾಗಿ ಗುರುತಿಸಿ ಸರ್ಕಾರದಿಂದ ಸಂವಿಧಾನತ್ಮಾಕವಾಗಿ ಸಿಗಬಹುದಾದ ಮೀಸಲಾತಿ/ಅವಕಾಶಗಳನ್ನು ಸಮಾಜದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಪ್ರಗತಿಗಾಗಿ ಪಡೆಯಬೇಕಾಗಿದೆ ಎಂದು ಸಂಘದ ಅಧ್ಯಕ್ಷರು ಕಾರ್ಯದರ್ಶಿಗಳು ಸಮುದಾಯದವರಿಗೆ ತಿಳಿ ಹೇಳಿದ್ದಾರೆ.