ತುಮಕೂರು: ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿ ದುಷ್ಕರ್ಮಿಗಳ ಹಾವಳಿ ಮಿತಿ ಮೀರುತ್ತಿದ್ದು, ಕಾರು–ಬೈಕ್‌ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ತಾಲೂಕಿನ ಕೋಳಾಲ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಸುಮಾರು 12.40ರ ಸುಮಾರಿಗೆ ಘಟನೆ ನಡೆದಿದೆ.
ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ವಿರೂಪಾಕ್ಷ ಅವರಿಗೆ ಸೇರಿದ ಮಹಿಂದ್ರಾ ಕಾರು ಹಾಗೂ ಎರಡು ಬೈಕ್‌ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಇಡಲಾಗಿದೆ ಎಂದು ತಿಳಿದುಬಂದಿದೆ. ಮುಸುಕುಧಾರಿ ಅಪರಿಚಿತ ವ್ಯಕ್ತಿಯೊಬ್ಬ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಹಳೆ ವೈಷಮ್ಯದ ಹಿನ್ನೆಲೆ ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆಯಿಂದ ಕಾರು ಮತ್ತು ಬೈಕ್‌ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗಮನಾರ್ಹವಾಗಿ, ಕಳೆದ ಎರಡು ವಾರಗಳ ಹಿಂದೆ ಕೊರಟಗೆರೆ ಪಟ್ಟಣದಲ್ಲಿ ನಿಲ್ಲಿಸಿದ್ದ ಕಾರುಗಳು ಮತ್ತು ಶಾಲಾ ಬಸ್‌ಗಳ ಗಾಜುಗಳನ್ನು ಪುಡಿ ಮಾಡಲಾಗಿತ್ತು. ಇಂತಹ ಘಟನೆಗಳು ಮರುಕಳಿಸುತ್ತಿದ್ದರೂ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿಲ್ಲವೆಂದು ಸ್ಥಳೀಯರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಅಪ್ರಾಪ್ತ ಬಾಲಕಿಗೆ ಗರ್ಭಿಣಿ ಮಾಡಿ, ಗರ್ಭಪಾತ ಮಾಡಿಸಿದ ಪ್ರಕರಣ : ಶಿಕ್ಷಕ ಬಂಧನ



















