ಬೆಂಗಳೂರು: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಅತ್ಯಾಪ್ತ ಮತ್ತು ಕಾಂಗ್ರೆಸ್ ಪಕ್ಷದ ಸಾಗರೋತ್ತರ ಘಟಕದ ಅಧ್ಯಕ್ಷ ಸತ್ಯನಾರಾಯಣ್ ಗಂಗಾರಾಂ ಪಿತ್ರೋಡಾ ಅಲಿಯಾಸ್ ಸ್ಯಾಮ್ ಪಿತ್ರೋಡಾ ವಿರುದ್ಧ ಭೂ ಕಬಳಿಕೆಯ ಆರೋಪ ಕೇಳಿ ಬಂದಿದೆ.
ಈ ಕುರಿತು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ, ಭ್ರಷ್ಟಾಚಾರ ವಿರೋಧಿ ವೇದಿಕೆಯ ಅಧ್ಯಕ್ಷ ರಮೇಶ್ ಎನ್.ಆರ್. ಆರೋಪಿಸಿದ್ದಾರೆ. ಈ ಕುರಿತು ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ಪಿಟ್ರೋಡಾ ಅವರು FRLHT ಎಂಬ ಹೆಸರಿನ ಸಂಸ್ಥೆಯನ್ನು 1996 ರಲ್ಲಿ ಮುಂಬಯಿನಲ್ಲಿ ನೊಂದಾಯಿಸಿಕೊಂಡಿದ್ದರು. ಆನಂತರ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ 5 ಹೆಕ್ಟೇರ್ (12.35 ಎಕರೆ) ವಿಸ್ತೀರ್ಣದ ಮೀಸಲು ಅರಣ್ಯ ಪ್ರದೇಶವನ್ನು ಬೆಂಗಳೂರಿನ ಯಲಹಂಕ ಬಳಿಯ ಜಾರಕಬಂಡೆ ಕಾವಲ್ ನಲ್ಲಿ 1996 ರಲ್ಲಿ 5 ವರ್ಷಗಳ ಗುತ್ತಿಗೆಗೆ ಪಡೆದಿದ್ದರು. ನಂತರ 2001ರಲ್ಲಿ 10 ವರ್ಷಗಳ ಗುತ್ತಿಗೆಗೆ ನವೀಕರಣ ಮಾಡಿಕೊಂಡಿದ್ದಾರೆ. ನಂತರ 2011 ರಿಂದ FRLHT ಸಂಸ್ಥೆಗೆ 12.35 ಎಕರೆ ವಿಸ್ತೀರ್ಣದ ಮೀಸಲು ಅರಣ್ಯ ಪ್ರದೇಶದ ಗುತ್ತಿಗೆ ಅವಧಿಯನ್ನು ವಿಸ್ತರಿಸಿಲ್ಲ. ಆದರೂ ಈ ಆಸ್ತಿಯನ್ನು ತಮ್ಮ ಬಳಿಯೇ ಇಟ್ಟುಕೊಂಡು ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ 150 ಕೋಟಿ ರೂ.ಗೂ ಹೆಚ್ಚು ಸರ್ಕಾರಿ ಮೌಲ್ಯದ ಹಾಗೂ 300 ಕೋಟಿ ರೂ. ಗೂ ಅಧಿಕ ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಯಲಹಂಕ ಬಳಿಯಿರುವ 12.35 ಎಕರೆ ವಿಸ್ತೀರ್ಣದ ಈ ಅತ್ಯಮೂಲ್ಯ ಸರ್ಕಾರಿ ಸ್ವತ್ತನ್ನು ಸರ್ಕಾರಕ್ಕೆ ಹಸ್ತಾಂತರಿಸದೆ, ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡು ಅಲ್ಲಿ ಬೆಳೆಯಲಾಗುತ್ತಿರುವ ಅಪರೂಪದ ಗಿಡ ಮೂಲಿಕೆ ಔಷಧಿ ಸಸಿಗಳ ಮಾರಾಟ ಮತ್ತು ಅದರ ಉತ್ಪನ್ನಗಳ ಮಾರಾಟದಿಂದ ಪ್ರತಿ ವರ್ಷ ತಲಾ 5 ರಿಂದ 6 ಕೋಟಿ ರೂ.ಗಳಷ್ಟು ಅಕ್ರಮ ಆದಾಯ ಗಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ತಮ್ಮ ಅತ್ಯಾಪ್ತ ನಾಗಿರುವ ಮತ್ತು FRLHT ಸಂಸ್ಥೆಯ ಸಂಸ್ಥಾಪಕ ಸದಸ್ಯನಾಗಿರುವ “ದರ್ಶನ್ ಶಂಕರ್” ಎಂಬಾತನ ಮೂಲಕ ಬೃಹತ್ತಾದ ಅಕ್ರಮ ಕಟ್ಟಡವನ್ನು ಈ ಮೀಸಲು ಅರಣ್ಯ ಪ್ರದೇಶದಲ್ಲಿ ನಿರ್ಮಿಸಿ I-AIM (Institute of Ayurveda & Integrative Medicine) ಎಂಬ ಆಯುರ್ವೇದ ಆಸ್ಪತ್ರೆಯನ್ನು ಕಾನೂನು ಬಾಹಿರವಾಗಿ ನಡೆಸುತ್ತಿದ್ದಾರೆ. ಈ ಕುರಿತು ಲೋಕಾಯುಕ್ತದಲ್ಲಿ ಮತ್ತು ಜಾರಿ ನಿರ್ದೇಶನಾಲಯದಲ್ಲಿ ದೂರುಗಳನ್ನು ದಾಖಲಿಸಲಾಗಿತ್ತು. ಈಗ “ಕರ್ನಾಟಕ ಭೂ ಕಬಳಿಕೆ ನಿಗ್ರಹ” ವಿಶೇಷ ನ್ಯಾಯಾಲಯದಲ್ಲಿ ಸರ್ಕಾರಿ ಭೂ ಕಬಳಿಕೆ ಸೇರಿದಂತೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.