ಬೆಳಗಾವಿ: ಕನ್ನಡ ಮಾತನಾಡಿದ್ದಕ್ಕೆ ನಿರ್ವಾಹಕರ ಮೇಲೆ ಹಲ್ಲೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪುಂಡರನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾನೂನು ಸಂಘರ್ಷಕ್ಕೆ ಒಳಗಾದ ಓರ್ವ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರು ಬೆಳಗಾವಿ ತಾಲೂಕಿನ ಬಾಳೇಕುಂದ್ರಿ ಗ್ರಾಮದವರು ಎನ್ನಲಾಗಿದೆ. ಘಟನೆ ನಡೆಯುತ್ತಿದ್ದಂತೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ, ಜೈಲಿಗೆ ಅಟ್ಟಿದ್ದಾರೆ.
ಬೆಳಗಾವಿ ತಾಲೂಕಿನ ಸುಳೇಬಾವಿ ಗ್ರಾಮದ ಹೊರವಲಯದಲ್ಲಿ ಬಸ್ ನಿರ್ವಾಹಕರೊಬ್ಬರ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿತ್ತು. ಬಸ್ ಹತ್ತಿದ್ದ ಯುವತಿಯೊಬ್ಬರಿಗೆ ಆಧಾರ್ ಕಾರ್ಡ್ ತೋರಿಸಲು ನಿರ್ವಾಹಕರು ಹೇಳಿದ್ದಾರೆ. ಆದರೆ ಯುವತಿ ಜೊತೆಗಿದ್ದ ಯುವಕನೊಬ್ಬ ಮರಾಠಿಯಲ್ಲಿ ಮಾತನಾಡುವಂತೆ ನಿರ್ವಾಹಕರಿಗೆ ಹೇಳಿದ್ದಾನೆ. ಆಗ ಮಾತಿಗೆ ಮಾತು ಬೆಳೆದಿದೆ. ಯುವಕ ತನ್ನ ಸ್ನೇಹಿತರನ್ನು ಕರೆಯಿಸಿ ನಿರ್ವಾಹಕರ ಮೇಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ನನಗೆ ಮರಾಠಿ ಬರುವುದಿಲ್ಲ. ಕನ್ನಡದಲ್ಲೇ ಮಾತನಾಡುತ್ತೇನೆ ಎಂದಿದ್ದಕ್ಕೆ ಬಸ್ ನಿರ್ವಾಹಕ ಮಹಾದೇವಪ್ಪ ಮೇಲೆ ಯುವಕರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಮರಾಠಿ ಪುಂಡ ಯುವಕನ ದೌರ್ಜನ್ಯದಿಂದ ಬಸ್ ಕಂಡಕ್ಟರ್ ಮಹಾದೇವಪ್ಪ ಗಾಯಗೊಂಡಿದ್ದಾರೆ. ಹಲ್ಲೆಗೊಳಗಾದ ಬಸ್ ನಿರ್ವಾಹಕ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಾವಿಯಲ್ಲಿ ಮರಾಠಿಗರ ದೌರ್ಜನ್ಯದ ವಿರುದ್ಧ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.