ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಶಿವಸೇನೆ ಮುಖಂಡ ಏಕನಾಥ್ ಶಿಂಧೆ ಕುರಿತು ಸ್ಟ್ಯಾಂಡ್ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ(Kunal Kamra) ಅವರು ಹಾಸ್ಯ ಕಾರ್ಯಕ್ರಮವೊಂದರಲ್ಲಿ ನೀಡಿರುವ ಹೇಳಿಕೆಯು ಮಹಾರಾಷ್ಟ್ರದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಕಾರ್ಯಕ್ರಮದಲ್ಲಿ ಶಿಂಧೆ ಅವರನ್ನು “ದ್ರೋಹಿ” ಎಂದು ಉಲ್ಲೇಖಿಸಿ, ಲೇವಡಿ ಮಾಡಿ ಹಾಡೊಂದನ್ನು ಕುನಾಲ್ ಕಾಮ್ರಾ ಹಾಡಿದ್ದು, ಇದರಿಂದ ರೊಚ್ಚಿಗೆದ್ದಿರುವ ಶಿಂಧೆ ಶಿವಸೇನೆಯ ಸದಸ್ಯರು, ಕಾರ್ಯಕ್ರಮ ನಡೆದ ಯುನಿಕಾಂಟಿನೆಂಟಲ್ ಮುಂಬೈ ಎಂಬ ಹೋಟೆಲ್‌ಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಜೊತೆಗೆ ಶಿಂಧೆ ಬಗ್ಗೆ ಆಡಿದ ಮಾತುಗಳಿಗೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಾಮ್ರಾಗೆ ಬೆದರಿಕೆಯನ್ನೂ ಒಡಿದ್ದಾರೆ. ಈ ಘಟನೆಯು ಮಹಾರಾಷ್ಟ್ರದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
2 ದಿನಗಳಲ್ಲಿ ಕ್ಷಮೆ ಯಾಚಿಸಬೇಕು:
ಶಿಂಧೆ ಶಿವಸೇನೆ ಶಾಸಕ ಮುರ್ಜಿ ಪಟೇಲ್ ಎಂಬವರು ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ಕುನಾಲ್ ಕಾಮ್ರಾ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಹಾಸ್ಯನಟನಿಗೆ “ಅವರ ಜಾಗ ಯಾವುದು” ಎಂಬುದನ್ನು ತೋರಿಸುತ್ತೇವೆ ಎಂದು ಹೇಳಿರುವ ಅವರು, ಕೂಡಲೇ ಕಾಮ್ರಾ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. “ಎರಡು ದಿನಗಳಲ್ಲಿ ಕುನಾಲ್ ಕಾಮ್ರಾ ಅವರು ಏಕನಾಥ್ ಶಿಂಧೆ ಅವರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಶಿವಸೈನಿಕರು ಅವರನ್ನು ಮುಂಬೈನಲ್ಲಿ ಮುಕ್ತವಾಗಿ ತಿರುಗಾಡಲು ಬಿಡುವುದಿಲ್ಲ. ಅವರು ಸಾರ್ವಜನಿಕವಾಗಿ ಎಲ್ಲಿಯಾದರೂ ಕಾಣಿಸಿಕೊಂಡರೆ, ಅವರ ಮುಖಕ್ಕೆ ಮಸಿ ಬಳಿಯುತ್ತೇವೆ. ವಿಧಾನಸಭೆಯಲ್ಲೂ ನಾವು ಈ ವಿಷಯವನ್ನು ಪ್ರಸ್ತಾಪಿಸುತ್ತೇವೆ. ಸಾಧ್ಯವಾದಷ್ಟು ಬೇಗ ಅವರ ವಿರುದ್ಧ ಕ್ರಮಕ್ಕೆ ಆದೇಶಿಸುವಂತೆ ರಾಜ್ಯದ ಗೃಹ ಸಚಿವರನ್ನು ವಿನಂತಿಸುತ್ತೇವೆ” ಎಂದು ಅವರು ಹೇಳಿದರು.

ಆಗಿದ್ದೇನು?
ಮುಂಬೈನ ಖಾರ್ ಎಂಬಲ್ಲಿರುವ ‘ಯುನಿಕಾಂಟಿನೆಂಟಲ್ ಮುಂಬೈ’ ಎಂಬ ಹೋಟೆಲ್‌ನಲ್ಲಿ ಕುನಾಲ್ ಕಾಮ್ರಾ ಅವರ ಹಾಸ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಅಲ್ಲಿ ತಮ್ಮ ಪ್ರದರ್ಶನದ ವೇಳೆ ಹಾಸ್ಯನಟ ಕಾಮ್ರಾ ಅವರು ಮಹಾರಾಷ್ಟ್ರ ಡಿಸಿಎಂ ಏಕನಾಥ ಶಿಂಧೆ ಅವರನ್ನು “ದೇಶದ್ರೋಹಿ” ಎಂದು ಉಲ್ಲೇಖಿಸಿದ್ದರು. ಜೊತೆಗೆ ಅವರನ್ನು ವಿಡಂಬನೆ ಮಾಡಿ ಹಾಡೊಂದನ್ನೂ ಹಾಡಿದರು. 2022ರಲ್ಲಿ ಶಾಸಕರ ಸಾಮೂಹಿಕ ಪಕ್ಷಾಂತರದ ಮೂಲಕ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯಿಂದ ಹೊರಬಂದು ಬಿಜೆಪಿ ಜೊತೆ ಏಕನಾಥ ಶಿಂಧೆ ಕೈಜೋಡಿಸಿದ್ದನ್ನು ವಿವರಿಸುತ್ತಾ, ಶಿಂಧೆ ಅವರನ್ನು ದ್ರೋಹಿ ಎಂದು ಉಲ್ಲೇಖಿಸಿದರು. ಅಲ್ಲದೇ, ಹಿಂದಿಯ ‘ದಿಲ್ ತೋ ಪಾಗಲ್ ಹೈ’ ಚಿತ್ರದ ಹಾಡಿನ ಮಾರ್ಪಡಿಸಿದ ಆವೃತ್ತಿಯನ್ನು ಬಳಸಿಕೊಂಡು, ಶಿಂಧೆ ಸೇನೆಯ ಬಂಡಾಯವನ್ನು ವ್ಯಂಗ್ಯವಾಗಿ ಪ್ರಸ್ತುತಪಡಿಸಿದರು.
ವಿಡಿಯೋ ವೈರಲ್:
ಕುನಾಲ್ ಕಾಮ್ರಾ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಸ್ಟ್ಯಾಂಡ್-ಅಪ್ ಕಾರ್ಯಕ್ರಮದ ವಿಡಿಯೋವನ್ನು ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಶಿವಸೇನೆ (ಏಕನಾಥ್ ಶಿಂಧೆ ಬಣ) ಕಾರ್ಯಕರ್ತರ ಗುಂಪು ಆ ಹೋಟೆಲ್ ಗೆ ಮುತ್ತಿಗೆ ಹಾಕಿತು. ಒಳಗೆ ನುಗ್ಗಿ ಹೋಟೆಲಲ್ಲಿದ್ದ ಕುರ್ಚಿಗಳನ್ನು ಕಿತ್ತು, ಬಿಸಾಕಿ, ದಾಂಧಲೆ ಎಬ್ಬಿಸಿತು. ಈ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.