ಹಾಂಗ್ ಕಾಂಗ್ : ಹಾಂಗ್ ಕಾಂಗ್ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಬೃಹತ್ ಗಾತ್ರದ ಸರಕು ಸಾಗಣೆ ವಿಮಾನವೊಂದು ನಿಯಂತ್ರಣ ಕಳೆದುಕೊಂಡು ಸಮುದ್ರಕ್ಕೆ ಬಿದ್ದಿದೆ. ಈ ಸಂದರ್ಭದಲ್ಲಿ ರನ್‌ವೇಯಲ್ಲಿ ವಾಹನದಲ್ಲಿದ್ದ ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಸೋಮವಾರ ಬೆಳಗ್ಗೆ 3.50ರ ಸುಮಾರಿಗೆ ಘಟನೆ ಸಂಭವಿಸಿದೆ.

ದುಬೈನಿಂದ ಹಾಂಗ್ ಕಾಂಗ್‌ಗೆ ತೆರಳುತ್ತಿದ್ದ ಎಮಿರೇಟ್ಸ್ ವಿಮಾನ, ರನ್‌ವೇಯಿಂದ ಜಾರಿಕೊಂಡು ವಾಹನಕ್ಕೆ ಡಿಕ್ಕಿಯಾಗಿ ಸಮುದ್ರದಲ್ಲಿ ಪತನಗೊಂಡಿತು. ವಿಮಾನ ಭಾಗಶಃ ನೀರಿನಲ್ಲಿ ಮುಳುಗಿರುವುದನ್ನು ಈ ದೃಶ್ಯದಲ್ಲಿ ನೋಡಬಹುದು.
ಬೋಯಿಂಗ್ 737 ಸರಣಿಯ ವಿಮಾನವಾದ EK9788 ಅನ್ನು ಟರ್ಕಿಶ್ ಕಂಪನಿಯಾದ ACT ಏರ್‌ಲೈನ್ಸ್ ಎಮಿರೇಟ್ಸ್‌ನಿಂದ ಗುತ್ತಿಗೆಗೆ ಪಡೆದುಕೊಂಡಿದೆ. ವಿಮಾನದಲ್ಲಿದ್ದ ಇಬ್ಬರು ಸಿಬ್ಬಂದಿಯನ್ನು ತುರ್ತು ಸೇವಾ ಸಿಬ್ಬಂದಿ ರಕ್ಷಿಸಿದ್ದಾರೆ.
ಅಹಮದಾಬಾದ್‌ನಲ್ಲಿ ನಡೆದಿತ್ತು ಭೀಕರ ವಿಮಾನ ದುರಂತ :
ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ಗೆ ತೆರಳುತ್ತಿದ್ದ AI171 ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾದ ಘಟನೆ ಕಳೆದ ಜೂನ್‌ನಲ್ಲಿ ಸಂಭವಿಸಿತ್ತು. ಅಹಮದಾಬಾದ್‌ನಿಂದ ಮಧ್ಯಾಹ್ನ 3.38ಕ್ಕೆ ಹೊರಟ ಬೋಯಿಂಗ್ 787-8 ವಿಮಾನದಲ್ಲಿ 242 ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು. ಈ ದುರ್ಘಟನೆಯಲ್ಲಿ ಪವಾಡ ಸದೃಶ ರೀತಿಯಲ್ಲಿ ಓರ್ವ ವ್ಯಕ್ತಿ ಪಾರಾದರೆ, ಉಳಿದ ಎಲ್ಲರೂ ಪ್ರಾಣ ಕಳೆದುಕೊಂಡಿದ್ದರು.