ಬೆಂಗಳೂರು: ಧರ್ಮಸ್ಥಳವನ್ನು ಗುರಿಯಾಗಿಸಿಕೊಂಡು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶಾಸಕ ಎಸ್.ಆರ್ ವಿಶ್ವನಾಥ್ ನೇತೃತ್ವದಲ್ಲಿ ನಾಳೆ(ಆ.16, ಶನಿವಾರ) ಧರ್ಮಸ್ಥಳಕ್ಕೆ ಬರೋಬ್ಬರಿ 500 ಕಾರುಗಳಲ್ಲಿ ಬಿಜೆಪಿ ಕಾರ್ಯಕರ್ತರು ಜಾಥಾ ನಡೆಸಲಿದ್ದಾರೆ.
ಯಲಹಂಕದಿಂದ ನಾಳೆ (ಶನಿವಾರ (ಆ.16) ಮುಂಜಾನೆ ಕಾರ್ಯಕರ್ತರು ಹೊರಡಲಿದ್ದಾರೆ. ನೂರಾರು ಮಂದಿ ಈ ಜಾಥಾದಲ್ಲಿ ಭಾಗಿಯಾಗಲಿದ್ದು, ಭಗವಾಧ್ವಜ ಹಿಡಿದು ಕೇಸರಿ ಶಾಲು ಧರಿಸಿ, ಧರ್ಮಸ್ಥಳಕ್ಕೆ ಹೊರಡಲಿದ್ದಾರೆ. ಪ್ರಯಾಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಮಧ್ಯಾಹ್ನ ಸುಮಾರು 3 ಗಂಟೆಗೆ ವಿಶ್ವನಾಥ್ ತಂಡ ಧರ್ಮಸ್ಥಳ ತಲುಪಲಿದೆ. ದೇವರ ದರ್ಶನ ಪಡೆದು ಧರ್ಮಸ್ಥಳದಲ್ಲೇ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದ ಶಾಸಕರ ನಿಯೋಗವೂ ಭಾನುವಾರ (ಆ.17) ಧರ್ಮಸ್ಥಳ ಭೇಟಿ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಉಡುಪಿ, ಮಂಗಳೂರು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಬಿಜೆಪಿ ಶಾಸಕರು ನಿಯೋಗದಲ್ಲಿರಲಿದ್ದಾರೆ ಎನ್ನಲಾಗಿದೆ. ಬಿಜೆಪಿ ನಾಯಕರು ಧರ್ಮಾಧಿಕಾರಿಗಳನ್ನೂ ಭೇಟಿ ಮಾಡಿ ನೈತಿಕ ಬೆಂಬಲ ಸೂಚಿಸಲಿದ್ದಾರೆ ಎಂದು ಬಿಜೆಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.



















