ಬೆಂಗಳೂರು: ಮದುವೆಯಾಗುವ ಸಂದರ್ಭದಲ್ಲಿ ಚಿನ್ನಾಭರಣ, ಹಣ ನೀಡಿದರೂ ಪತಿರಾಯನೊಬ್ಬ ಪತ್ನಿಗೆ ಕಿರುಕುಳ ನೀಡಿದ್ದಾನೆ ಎಂಬ ಆರೋಪವೊಂದು ಕೇಳಿ ಬಂದಿದೆ.
ಮದುವೆಯಾದ ಒಂದು ವರ್ಷದೊಳಗೆ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಮತ್ತೆ ಪತಿರಾಯ ವರದಕ್ಷಿಣೆ ಕಾಟ ಕೊಡುತ್ತಿದ್ದಾನೆ ಎಂದು ಆರೋಪಿಸಿ ನೆಲಮಂಗಲದ 24 ವರ್ಷದ ವಧು ಬೆಂಗಳೂರಿನ ವರ್ತೂರಿನ ಪತಿ ಕಿರಣ್ ಸೇರಿದಂತೆ ಮನೆಯವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ವರ್ತೂರಿನ ಕಿರಣ್ ಜೊತೆ ವಧು ಮದುವೆ ಮಾಡಿಕೊಂಡಿದ್ದರು. ಆದರೆ, ಇತ್ತೀಚೆಗೆ ಕಾರು, ಚಿನ್ನಾಭರಣ ತರುವವರೆಗೂ ಪ್ರಸ್ಥ ಶಾಸ್ತ್ರ ಮಾಡಲ್ಲವೆಂದು ಪಟ್ಟು ಹಿಡಿದಿದ್ದಾರಂತೆ. ಅಲ್ಲದೇ, ಮೊಬೈಲ್ ಫೋನ್ ಕಿತ್ತುಕೊಂಡು ರೂಂನಲ್ಲಿ ಕೂಡಿಹಾಕಿ ಮಾನಸಿಕ ಹಿಂಸೆ ಕೊಟ್ಟಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.
ವರದಕ್ಷಿಣೆ ತಂದುಕೊಟ್ಟರೆ ನಾನು ಪ್ರಸ್ಥ ಕಾರ್ಯವನ್ನು ಮಾಡಿಕೊಳ್ಳುತ್ತೇನೆ. ಇಲ್ಲವಾದಲ್ಲಿ ನಾನು ಮತ್ತೊಂದು ಮದುವೆ ಮಾಡಿಕೊಳ್ಳುತ್ತೇನೆ ಎಂದು ಪತಿ ಕಿರಣ್ ಬೆದರಿಕೆ ಹಾಕಿದ್ದಾನೆ. ಅಲ್ಲದೇ, ದೈಹಿಕ ಹಿಂಸೆ ನೀಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ. ಅಲ್ಲದೇ, ಮದುವೆಯಾದ ಯುವಕ ಕೇವಲ ಎಸ್ಸೆಸ್ಸೆಲ್ಸಿ ಓದಿ ಎಂಬಿಎ ಓದಿದ್ದೇನೆ ಎಂದು ಸುಳ್ಳು ಹೇಳಿ ಮದುವೆಯಾಗಿದ್ದಾನೆ. ಎಂಜಿ ರೋಡ್ ನಲ್ಲಿ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಬೇರೆ ನಂಬಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.
ಯುವತಿ ತನಗಾಗಿರುವ ಅನ್ಯಾಯಕ್ಕೆ ಮಹಿಳಾ ಆಯೋಗದಲ್ಲಿ ದೂರು ಕೊಟ್ಟರೂ ಕೌನ್ಸಿಲ್ ಗೆಬಾರದೆ ನಾಪತ್ತೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಪತಿ ಕಿರಣ್, ಮಾವ ಸೀನಪ್ಪ, ಅತ್ತೆ ಶಶಿಕಲಾ, ಸಂಬಂಧಿ ಮನೋಜೆ ವಿರುದ್ಧ ನವ ವಿವಾಹಿತೆ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.