ಮೊರದಾಬಾದ್ (ಉತ್ತರ ಪ್ರದೇಶ): ಮತದಾರರ ಪಟ್ಟಿ ಪರಿಷ್ಕರಣೆ (SIR) ಕೆಲಸದ ಅತಿಯಾದ ಒತ್ತಡದಿಂದ ಮನನೊಂದು ಬೂತ್ ಮಟ್ಟದ ಅಧಿಕಾರಿ (BLO) ಒಬ್ಬರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಉತ್ತರ ಪ್ರದೇಶದ ಮೊರದಾಬಾದ್ನಲ್ಲಿ ನಡೆದಿದೆ. ಆತ್ಮಹತ್ಯೆಗೂ ಮುನ್ನ ಅವರು ಕಣ್ಣೀರು ಹಾಕುತ್ತಾ ಅಳಲು ತೋಡಿಕೊಂಡಿರುವ ವಿಡಿಯೋ ಈಗ ವೈರಲ್ ಆಗಿದೆ.
ಮೃತಪಟ್ಟವರನ್ನು ಸರ್ವೇಶ್ ಸಿಂಗ್ (46) ಎಂದು ಗುರುತಿಸಲಾಗಿದೆ. ಇವರು ಮೂಲತಃ ಶಾಲಾ ಶಿಕ್ಷಕರಾಗಿದ್ದು, ಅಕ್ಟೋಬರ್ 7 ರಂದು ಇವರಿಗೆ ಬಿಎಲ್ಒ ಜವಾಬ್ದಾರಿ ನೀಡಲಾಗಿತ್ತು. ಇದು ಇವರ ಮೊದಲ ಚುನಾವಣಾ ಕರ್ತವ್ಯವಾಗಿತ್ತು. ಭಾನುವಾರ ಬೆಳಿಗ್ಗೆ ಇವರ ಪತ್ನಿ ಬಬ್ಲಿ ದೇವಿ ನೋಡಿದಾಗ, ಸರ್ವೇಶ್ ಅವರು ಮನೆಯ ಸ್ಟೋರ್ ರೂಮ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಡೆತ್ ನೋಟ್ನಲ್ಲಿ ಏನಿದೆ?
ಸರ್ವೇಶ್ ಅವರು ಜಿಲ್ಲಾ ಶಿಕ್ಷಣಾಧಿಕಾರಿಯನ್ನು ಉದ್ದೇಶಿಸಿ ಬರೆದ ಎರಡು ಪುಟಗಳ ಕೈಬರಹದ ಡೆತ್ ನೋಟ್ (ಸುಸೈಡ್ ನೋಟ್) ಪತ್ತೆಯಾಗಿದೆ. ಅದರಲ್ಲಿ, “ನಾನು ಹಗಲಿರುಳು ಶ್ರಮಿಸುತ್ತಿದ್ದರೂ ಎಸ್ಐಆರ್ ಟಾರ್ಗೆಟ್ (ಗುರಿ) ತಲುಪಲು ಸಾಧ್ಯವಾಗುತ್ತಿಲ್ಲ. ಆತಂಕದಿಂದ ರಾತ್ರಿ ನಿದ್ದೆ ಬರುತ್ತಿಲ್ಲ, ಕೇವಲ 2-3 ಗಂಟೆ ನಿದ್ದೆ ಮಾಡುತ್ತಿದ್ದೇನೆ. ನನಗೆ ನಾಲ್ವರು ಹೆಣ್ಣುಮಕ್ಕಳಿದ್ದಾರೆ, ಅವರಲ್ಲಿ ಇಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ದಯವಿಟ್ಟು ನನ್ನನ್ನು ಕ್ಷಮಿಸಿ,” ಎಂದು ಬರೆದಿದ್ದಾರೆ.
ವೈರಲ್ ವಿಡಿಯೋ:
ಆತ್ಮಹತ್ಯೆಗೂ ಮುನ್ನ ಸರ್ವೇಶ್ ಅವರು ರೆಕಾರ್ಡ್ ಮಾಡಿರುವ ವಿಡಿಯೋದಲ್ಲಿ, ಕೆಲಸದ ಒತ್ತಡದ ಬಗ್ಗೆ ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ತಾವು ಎಷ್ಟೇ ಕಷ್ಟಪಟ್ಟು ದುಡಿದರೂ ಮೇಲಧಿಕಾರಿಗಳಿಂದ ಒತ್ತಡ ಬರುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಸರಣಿ ಸಾವುಗಳು?
ಕಳೆದ ಕೆಲವು ವಾರಗಳಲ್ಲಿ ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕೆಲಸದ ಒತ್ತಡದಿಂದಾಗಿ ಕೆಲವು ಬಿಎಲ್ಒಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಥವಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ವರದಿಗಳಿವೆ. ಬಿಜ್ನೋರ್ನಲ್ಲಿ ಶೋಭಾ ರಾಣಿ ಎಂಬ ಮಹಿಳಾ ಬಿಎಲ್ಒ ಕೂಡ ಕೆಲಸದ ಒತ್ತಡದ ನಡುವೆಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಅಧಿಕಾರಿಗಳ ಪ್ರತಿಕ್ರಿಯೆ:
ಜಿಲ್ಲಾಧಿಕಾರಿ ಅನುಜ್ ಕುಮಾರ್ ಸಿಂಗ್ ಅವರು ಘಟನೆಯ ಬಗ್ಗೆ ಪ್ರತಿಕ್ರಿಯಿಸಿ, ಸರ್ವೇಶ್ ಅವರ ಕೆಲಸ ಉತ್ತಮವಾಗಿತ್ತು ಎಂದು ಹೇಳಿದ್ದಾರೆ. ಕುಟುಂಬಕ್ಕೆ ಸರ್ಕಾರಿ ಕೆಲಸ ಮತ್ತು ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಏತನ್ಮಧ್ಯೆ, ಚುನಾವಣಾ ಆಯೋಗವು ಎಸ್ಐಆರ್ ಕಾಲಮಿತಿಯನ್ನು ಒಂದು ವಾರ ವಿಸ್ತರಿಸಿದೆ.
ಇದನ್ನೂ ಓದಿ: ಸೋಲಿನ ಹತಾಶೆ ಸಂಸತ್ತಲ್ಲಿ ತೋರಿಸಬೇಡಿ ಎಂದು ವಿಪಕ್ಷಗಳಿಗೆ ಪ್ರಧಾನಿ ಮೋದಿ ಟಾಂಗ್ : ಪ್ರಿಯಾಂಕಾ ತಿರುಗೇಟು


















