ಬೆಂಗಳೂರು : ಪಟಾಕಿ ಮಳಿಗೆ ಮಾಲೀಕರಿಂದ ಭಾರಲೋಹಯುಕ್ತ ರಾಸಾಯನಿಕ ಪಟಾಕಿ ಮಾರಾಟ ಮಾಡದಂತೆ ಮತ್ತು ಪರಿಸರ ಸ್ನೇಹಿ ಹಸಿರು ಪಟಾಕಿ ಮಾತ್ರ ಮಾರಾಟ ಮಾಡುವಂತೆ ಮುಚ್ಚಳಿಕೆ ಬರೆಸಿಕೊಳ್ಳುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿದ್ದಾರೆ.
ವಿಧಾನಸೌಧದ ಮೆಟ್ಟಿಲುಗಳ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಂಡಳಿಯ ಅಧ್ಯಕ್, ನರೇಂದ್ರ ಸ್ವಾಮಿ ಅವರೊಂದಿಗೆ 68 ಪರಿಸರ ಸ್ನೇಹಿ(ಇವಿ) ವಾಹನಗಳಿಗೆ ಹಸಿರು ನಿಶಾನೆ ತೋರಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರಲೋಹಯುಕ್ತ ರಾಸಾಯನಿಕ ಪಟಾಕಿ ಮಾರಾಟ ಮಾಡುವವರ ಪರವಾನಗಿ ರದ್ದುಪಡಿಸಲು ಕ್ರಮ ವಹಿಸುವಂತೆ ಸೂಚಿಸಿದರು.
15 ವರ್ಷ ಪೂರೈಸಿದ ಡಿಸೆಲ್ ವಾಹನಗಳನ್ನು ಬಳಕೆ ಮಾಡುವಂತಿಲ್ಲ. ಅದನ್ನು ಸ್ಕ್ರ್ಯಾಪ್ ನೀತಿಯಂತೆ ಬಳಕೆಯಿಂದ ದೂರವಿಡಬೇಕು. ಮಂಡಳಿಯಲ್ಲಿ ವಾಹನಗಳ ಕೊರತೆಯಿಂದ ಏಕ ಬಳಕೆ ಪ್ಲಾಸ್ಟಿಕ್, ವೈದ್ಯಕೀಯ ತ್ಯಾಜ್ಯ, ಇ-ತ್ಯಾಜ್ಯ ವಿಲೇವಾರಿ ಘಟಕಗಳ ಮೇಲೆ ನಿಗಾ ಇಡಲು ಮತ್ತು ಏಕ ಬಳಕೆ ಪ್ಲಾಸ್ಟಿಕ್ ತಯಾರಿಕಾ ಘಟಕ, ಮಳಿಗೆಗಳ ತಪಾಸಣೆ, ಪರಿಶೀಲನೆ ಮಾಡಲು, ಜಲ ಮೂಲಗಳ ಗುಣಮಟ್ಟ ಪರೀಕ್ಷೆ ಮಾಡಲು ಅಡ್ಡಿಯಾಗುತ್ತಿತ್ತು.
ಈ ನಿಟ್ಟಿನಲ್ಲಿ 68 ಇವಿ ವಾಹನಗಳಿಗೆ ಮಂಡಳಿ ಕಳುಹಿಸಿದ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ ಎಂದರು. ಈ ವಾಹನಗಳನ್ನು ಸದ್ಬಳಕೆ ಮಾಡಿಕೊಂಡು, ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಪರಿಸರ ಸಂರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಮಂಡಳಿಯ ಅಧಿಕಾರಿಗಳಿಗೆ ಈಶ್ವರ ಖಂಡ್ರೆ ತಿಳಿಸಿದರು.



















