ಒಟ್ಟಾವಾ: ಕೆನಡಾದಲ್ಲಿ ಕಿಡಿಗೇಡಿಗಳ ಅಟ್ಟಹಾಸ ಮುಂದುವರಿದಿದ್ದು, ಅಲ್ಲಿನ ಚಿತ್ರಮಂದಿರವೊಂದು ಭಾರತೀಯ ಚಲನಚಿತ್ರಗಳ ಪ್ರದರ್ಶನವನ್ನು ಸ್ಥಗಿತಗೊಳಿಸಿದೆ. ಕಳೆದ ಒಂದು ವಾರದಲ್ಲಿ ಎರಡು ಬಾರಿ ನಡೆದ ಬೆಂಕಿ ಹಚ್ಚುವ ಯತ್ನ ಮತ್ತು ಗುಂಡಿನ ದಾಳಿಯ ನಂತರ, ಕೆನಡಾದ ಒಂಟಾರಿಯೊ ಪ್ರಾಂತ್ಯದ ಫಿಲ್ಮ್.ಸಿಎ (Film.ca) ಚಿತ್ರಮಂದಿರ ಈ ನಿರ್ಧಾರ ಕೈಗೊಂಡಿದೆ.

ಹಿಂಸಾತ್ಮಕ ದಾಳಿಗಳ ಪರಿಣಾಮವಾಗಿ, ಚಿತ್ರಮಂದಿರವು ರಿಷಬ್ ಶೆಟ್ಟಿ ಅಭಿನಯದ “ಕಾಂತಾರ: ಎ ಲೆಜೆಂಡ್ ಚಾಪ್ಟರ್ 1” ಮತ್ತು ಪವನ್ ಕಲ್ಯಾಣ್ ನಟನೆಯ “ದೇ ಕಾಲ್ ಹಿಮ್ ಓಜಿ” ಚಿತ್ರಗಳ ಪ್ರದರ್ಶನವನ್ನು ಹಿಂಪಡೆದಿದೆ. ಈ ದಾಳಿಗಳು ದಕ್ಷಿಣ ಏಷ್ಯಾದ ಚಲನಚಿತ್ರಗಳ ಪ್ರದರ್ಶನಕ್ಕೆ ಸಂಬಂಧಿಸಿವೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ನಡೆದಿದ್ದೇನು?
ಸೆಪ್ಟೆಂಬರ್ 25 ರಂದು ಮುಂಜಾನೆ 5:20ರ ಸುಮಾರಿಗೆ ಚಿತ್ರಮಂದಿರದ ಮೇಲೆ ಮೊದಲ ದಾಳಿ ನಡೆದಿತ್ತು. ಇಬ್ಬರು ಶಂಕಿತರು ಕೆಂಪು ಗ್ಯಾಸ್ ಕ್ಯಾನ್‌ಗಳನ್ನು ಹೊತ್ತು ತಂದು, ಚಿತ್ರಮಂದಿರದ ಪ್ರವೇಶ ದ್ವಾರಕ್ಕೆ ದಹನಕಾರಿ ದ್ರವವನ್ನು ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಅದೃಷ್ಟವಶಾತ್, ಬೆಂಕಿ ಹೊರಭಾಗದಲ್ಲಿ ಮಾತ್ರ ಕಾಣಿಸಿಕೊಂಡಿದ್ದು, ಚಿತ್ರಮಂದಿರಕ್ಕೆ ಸ್ವಲ್ಪ ಮಟ್ಟಿಗೆ ಹಾನಿಯಾಗಿದೆ ಎಂದು ಹಾಲ್ಟನ್ ಪೊಲೀಸರು ತಿಳಿಸಿದ್ದಾರೆ.

ಇದಾದ ಒಂದು ವಾರದ ನಂತರ, ಅ.2ರಂದು ಮುಂಜಾನೆ 1:50 ಕ್ಕೆ ಎರಡನೇ ದಾಳಿ ನಡೆದಿದೆ. ಓರ್ವ ಶಂಕಿತ ಕಟ್ಟಡದ ಪ್ರವೇಶ ದ್ವಾರದ ಮೂಲಕ ಹಲವು ಸುತ್ತು ಗುಂಡು ಹಾರಿಸಿದ್ದಾನೆ. ಪೊಲೀಸರ ಪ್ರಕಾರ, ಶಂಕಿತನು ಕಪ್ಪು ಚರ್ಮದ, ದಪ್ಪ ದೇಹದ ವ್ಯಕ್ತಿಯಾಗಿದ್ದು, ಕಪ್ಪು ಬಟ್ಟೆ ಮತ್ತು ಕಪ್ಪು ಮುಖವಾಡ ಧರಿಸಿದ್ದನು. ಈ ಎರಡೂ ದಾಳಿಗಳು ಉದ್ದೇಶಪೂರ್ವಕವಾಗಿಯೇ ನಡೆದಿವೆ ಎಂದು ತನಿಖಾಧಿಕಾರಿಗಳು ನಂಬಿದ್ದಾರೆ.
ಚಿತ್ರಮಂದಿರದ ಪ್ರತಿಕ್ರಿಯೆ
ಆರಂಭದಲ್ಲಿ, ಚಿತ್ರಮಂದಿರದ ಸಿಇಒ ಜೆಫ್ ನೋಲ್, “ನಾವು ನಮಗೆ ಬೇಕಾದ ಸಿನಿಮಾಗಳನ್ನು, ನಮಗೆ ಬೇಕಾದಾಗ ಪ್ರದರ್ಶಿಸುತ್ತೇವೆ” ಎಂದು ಧೈರ್ಯದಿಂದ ಹೇಳಿದ್ದರು. ಆದರೆ, ನಂತರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ಚಿತ್ರಮಂದಿರ, “ದಕ್ಷಿಣ ಏಷ್ಯಾದ ಚಲನಚಿತ್ರಗಳ ಪ್ರದರ್ಶನದಲ್ಲಿ ಭಾಗವಹಿಸಿದ್ದೇ ಈ ಘಟನೆಗಳಿಗೆ ಕಾರಣವೆಂದು ತೋರುತ್ತದೆ. ನಾವು ಬೆದರಿಕೆಗಳಿಗೆ ಮಣಿಯಲು ಇಷ್ಟಪಡುವುದಿಲ್ಲವಾದರೂ, ಪರಿಸ್ಥಿತಿ ಉಲ್ಬಣಗೊಂಡಿರುವುದರಿಂದ ನಮ್ಮ ಸಮುದಾಯವನ್ನು ರಕ್ಷಿಸಲು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಿದೆ” ಎಂದು ತಿಳಿಸಿ ಭಾರತೀಯ ಚಿತ್ರಗಳ ಪ್ರದರ್ಶನವನ್ನು ಹಿಂಪಡೆಯಿತು.
ಇತರೆ ಚಿತ್ರಮಂದಿರಗಳಲ್ಲೂ ಪ್ರದರ್ಶನ ರದ್ದು
ಫಿಲ್ಮ್.ಸಿಎ ಚಿತ್ರಮಂದಿರದ ಮೇಲಿನ ದಾಳಿಯ ನಂತರ, ಮತ್ತೊಂದು ಕೆನಡಾದ ಚಿತ್ರಮಂದಿರವಾದ ಯಾರ್ಕ್ ಸಿನಿಮಾಸ್ ಕೂಡ ಭಾರತೀಯ ಚಲನಚಿತ್ರಗಳ ಪ್ರದರ್ಶನವನ್ನು ರದ್ದುಗೊಳಿಸಿದೆ. “ಇತ್ತೀಚಿನ ಘಟನೆಗಳಿಂದಾಗಿ, ಮುಂದಿನ ಸೂಚನೆ ಬರುವವರೆಗೆ ನಾವು ಭಾರತೀಯ ಚಲನಚಿತ್ರಗಳನ್ನು ಪ್ರದರ್ಶಿಸುವುದಿಲ್ಲ. ನಮ್ಮ ಉದ್ಯೋಗಿಗಳು ಮತ್ತು ಅತಿಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಅದು ಹೇಳಿಕೆ ನೀಡಿದೆ. ಈ ದಾಳಿಗಳ ಹಿಂದೆ ಖಲಿಸ್ತಾನಿ ಉಗ್ರರ ಕೈವಾಡವಿರಬಹುದು ಎಂದು ಮೂಲಗಳು ಶಂಕಿಸಿದ್ದರೂ, ಪೊಲೀಸರು ಇನ್ನೂ ಯಾವುದೇ ಉದ್ದೇಶವನ್ನು ಖಚಿತಪಡಿಸಿಲ್ಲ.