ನವದೆಹಲಿ : 26/11ರ ಮುಂಬೈ ದಾಳಿಯ ರೂವಾರಿ ತಹಾವ್ವುರ್ ಹುಸೇನ್ ರಾಣಾನ ಕೆನಡಾ ಪೌರತ್ವವನ್ನು ರದ್ದುಗೊಳಿಸಲು ಕೆನಡಾ ಸರ್ಕಾರ ಮುಂದಾಗಿದೆ. ಹಿಂದಿನ ಜಸ್ಟಿನ್ ಟ್ರುಡೊ ಸರ್ಕಾರದ ಅವಧಿಯಲ್ಲಿ ತೀವ್ರವಾಗಿ ಹದಗೆಟ್ಟಿದ್ದ ಭಾರತ ಮತ್ತು ಕೆನಡಾ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ, ಕೆನಡಾದ ನೂತನ ಪ್ರಧಾನಿ ಮಾರ್ಕ್ ಕಾರ್ನಿ ಅವರು ಫೆ.26ರಂದು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.
ಈ ಮಹತ್ವದ ಭೇಟಿಗೂ ಮುನ್ನವೇ ಕೆನಡಾ ಸರ್ಕಾರ ಈ ನಿರ್ಧಾರ ಕೈಗೊಂಡಿರುವುದು ತೀವ್ರ ಕುತೂಹಲ ಕೆರಳಿಸಿದೆ. ಸದ್ಯ ಅಮೆರಿಕದಿಂದ ಗಡೀಪಾರಾಗಿರುವ ಪಾಕಿಸ್ತಾನ ಮೂಲದ ಉದ್ಯಮಿ ರಾಣಾ ಭಾರತದ ವಶದಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದಾನೆ. 2008ರಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರರು ಮುಂಬೈನಲ್ಲಿ ನಡೆಸಿದ ಭೀಕರ ದಾಳಿಯಲ್ಲಿ 160ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು.
ಕೆನಡಾ ಸರ್ಕಾರ ರಾಣಾನ ಪೌರತ್ವವನ್ನು ರದ್ದುಗೊಳಿಸಲು ಆತನ ಮೇಲಿರುವ ಭಯೋತ್ಪಾದನೆ ಆರೋಪಗಳನ್ನು ನೇರ ಆಧಾರವಾಗಿಟ್ಟುಕೊಂಡಿಲ್ಲ. ಬದಲಾಗಿ, ಪೌರತ್ವ ಪಡೆಯುವಾಗ ಆತ ಸುಳ್ಳು ಮಾಹಿತಿ ನೀಡಿ ವ್ಯವಸ್ಥೆಯನ್ನು ವಂಚಿಸಿದ್ದಾನೆ ಎಂಬ ಕಾರಣಕ್ಕಾಗಿ ಈ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
‘ಕೆನಡಾದ ವಲಸೆ, ನಿರಾಶ್ರಿತರು ಮತ್ತು ಪೌರತ್ವ’ (IRCC) ಇಲಾಖೆಯು ರಾಣಾಗೆ ಈ ಕುರಿತು ಅಧಿಕೃತ ನೋಟಿಸ್ ಜಾರಿ ಮಾಡಿದ್ದು, 2001ರಲ್ಲಿ ಆತ ಪಡೆದಿದ್ದ ಕೆನಡಾ ಪೌರತ್ವವನ್ನು ಹಿಂಪಡೆಯುವ ಉದ್ದೇಶವನ್ನು ಸ್ಪಷ್ಟಪಡಿಸಿದೆ. 1997ರಲ್ಲಿ ಕೆನಡಾಗೆ ವಲಸೆ ಬಂದಿದ್ದ 65 ವರ್ಷದ ರಾಣಾ, 2000ನೇ ಇಸವಿಯಲ್ಲಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವಾಗ ತನ್ನ ವಾಸ್ತವ್ಯದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದ ಎಂಬುದು ಇಲಾಖೆಯ ಪ್ರಮುಖ ಆರೋಪ.
ಪೌರತ್ವಕ್ಕೆ ಅರ್ಜಿ ಸಲ್ಲಿಸುವ ಮುನ್ನ ತಾನು ಒಟ್ಟಾವಾ ಮತ್ತು ಟೊರೊಂಟೊದಲ್ಲಿ ನಾಲ್ಕು ವರ್ಷಗಳ ಕಾಲ ನೆಲೆಸಿದ್ದಾಗಿ ಹಾಗೂ ಈ ಅವಧಿಯಲ್ಲಿ ಕೇವಲ 6 ದಿನ ಮಾತ್ರ ದೇಶದಿಂದ ಹೊರಗಿದ್ದೆ ಎಂದು ರಾಣಾ ಹೇಳಿಕೊಂಡಿದ್ದ. ಆದರೆ, ‘ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್’ ನಡೆಸಿದ ತನಿಖೆಯಲ್ಲಿ ಆತನ ಬಣ್ಣ ಬಯಲಾಗಿತ್ತು. ಆತ ಕೆನಡಾದಲ್ಲಿರುವ ಬದಲು, ಹೆಚ್ಚಿನ ಸಮಯವನ್ನು ಅಮೆರಿಕದ ಷಿಕಾಗೋದಲ್ಲಿಯೇ ಕಳೆದಿದ್ದ. ಅಲ್ಲಿ ಆತ ಹಲವಾರು ಆಸ್ತಿಗಳನ್ನು ಹೊಂದಿದ್ದಲ್ಲದೆ, ವಲಸೆ ಸಲಹಾ ಕೇಂದ್ರ ಹಾಗೂ ದಿನಸಿ ಅಂಗಡಿಯಂತಹ ವ್ಯವಹಾರಗಳನ್ನು ನಡೆಸುತ್ತಿದ್ದ ಎಂಬುದು ತನಿಖೆಯಿಂದ ದೃಢಪಟ್ಟಿದೆ. ತನ್ನ ಸುದೀರ್ಘ ಗೈರುಹಾಜರಿಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡುವ ಮೂಲಕ ಆತ ಅಧಿಕಾರಿಗಳ ದಾರಿ ತಪ್ಪಿಸಿದ್ದಾನೆ ಎಂದು ಐಆರ್ಸಿಸಿ ವರದಿಯಲ್ಲಿ ಗಂಭೀರ ಆರೋಪ ಮಾಡಲಾಗಿದೆ.
ಕಾನೂನು ಹೋರಾಟ
ಪ್ರಸ್ತುತ ಈ ಪ್ರಕರಣವನ್ನು ಕೆನಡಾದ ಫೆಡರಲ್ ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿದೆ. ಸುಳ್ಳು ಮಾಹಿತಿ ಅಥವಾ ವಂಚನೆಯ ಮೂಲಕ ಪೌರತ್ವ ಪಡೆಯಲಾಗಿದೆಯೇ ಎಂಬುದನ್ನು ನಿರ್ಧರಿಸುವ ಅಂತಿಮ ಅಧಿಕಾರ ಇರುವುದು ಇದೇ ನ್ಯಾಯಾಲಯಕ್ಕೆ. ಆದರೆ, ಸರ್ಕಾರದ ಈ ನಡೆಯನ್ನು ಪ್ರಶ್ನಿಸಿರುವ ರಾಣಾನ ಕಾನೂನು ತಂಡ, ಇದೊಂದು ಅನ್ಯಾಯದ ನಿರ್ಧಾರ ಹಾಗೂ ಆತನ ಹಕ್ಕುಗಳ ಉಲ್ಲಂಘನೆ ಎಂದು ವಾದಿಸಿದೆ.
ಕಳೆದ ವಾರ ಈ ಪ್ರಕರಣದ ವಿಚಾರಣೆ ಫೆಡರಲ್ ನ್ಯಾಯಾಲಯದಲ್ಲಿ ನಡೆದಿದ್ದು, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕೆಲವು ಸೂಕ್ಷ್ಮ ಮಾಹಿತಿಗಳನ್ನು ಬಹಿರಂಗಪಡಿಸದಿರಲು ಸರ್ಕಾರಿ ವಕೀಲರು ನ್ಯಾಯಾಲಯದ ಅನುಮತಿ ಕೋರಿದ್ದಾರೆ. ವಲಸೆ ಇಲಾಖೆಯ ವಕ್ತಾರರ ಪ್ರಕಾರ, ಕೆನಡಾದ ಪೌರತ್ವ ವ್ಯವಸ್ಥೆಯ ಸಮಗ್ರತೆಯನ್ನು ಕಾಪಾಡುವ ದೃಷ್ಟಿಯಿಂದ ಇಂತಹ ವಂಚನೆ ಪ್ರಕರಣಗಳಲ್ಲಿ ಪೌರತ್ವ ರದ್ದುಪಡಿಸುವುದು ಅನಿವಾರ್ಯವಾಗಿದೆ. ಕಳೆದ ಒಂದು ದಶಕದಲ್ಲಿ ಇಂತಹ ಪೌರತ್ವ ರದ್ದತಿ ಪ್ರಕರಣಗಳು ಬೆರಳೆಣಿಕೆಯಷ್ಟು ಮಾತ್ರ ವರದಿಯಾಗಿವೆ.
ಭಾರತದ ವಶದಲ್ಲಿ ಉಗ್ರ ರಾಣಾ
ಅಮೆರಿಕದಿಂದ ಗಡೀಪಾರುಗೊಂಡ ಬಳಿಕ ಲಾಸ್ ಏಂಜಲೀಸ್ನಿಂದ ವಿಶೇಷ ವಿಮಾನದ ಮೂಲಕ ನವದೆಹಲಿಗೆ ಕರೆತರಲಾದ ತಹಾವ್ವುರ್ ರಾಣಾನನ್ನು ಏ.10 ರಂದು ರಾಷ್ಟ್ರೀಯ ತನಿಖಾ ದಳ (NIA) ಅಧಿಕೃತವಾಗಿ ಬಂಧಿಸಿತ್ತು. ಮುಂಬೈ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನಿ ಉಗ್ರರೊಂದಿಗೆ ಸೇರಿ ಸಂಚು ರೂಪಿಸಿದ ಪ್ರಮುಖ ಆರೋಪಿಗಳಲ್ಲಿ ಈತನೂ ಒಬ್ಬನಾಗಿದ್ದು, ಇದೀಗ ಈತನ ಕೆನಡಾ ಪೌರತ್ವವೂ ರದ್ದಾಗುವ ಭೀತಿ ಎದುರಾಗಿದೆ.
ಇದನ್ನೂ ಓದಿ : ಪಾಕಿಸ್ತಾನ, ಶ್ರೀಲಂಕಾಕ್ಕಾಗಿ ಟಿ20 ವಿಶ್ವಕಪ್ ನಿಯಮ ಸಡಿಲಿಸಿದ ಐಸಿಸಿ



















