ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಗೆ ಸಿದ್ಧತೆಗಳು ಪ್ರಾರಂಭವಾಗಿವೆ. ಮುಂಬರುವ ಮಿನಿ ಹರಾಜಿನ ಬಗ್ಗೆ ಕುತೂಹಲಕಾರಿ ಚರ್ಚೆಗಳು ನಡೆಯುತ್ತಿವೆ. ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಆಸ್ಟ್ರೇಲಿಯಾದ ಯುವ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಅವರು ಐಪಿಎಲ್ 2026ರ ಮಿನಿ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ ‘ಆಶ್ ಕಿ ಬಾತ್’ ನಲ್ಲಿ ಮಾತನಾಡಿದ ಅವರು, ಮಿನಿ ಹರಾಜಿನಲ್ಲಿ ವಿದೇಶಿ ಆಲ್ರೌಂಡರ್ಗಳಿಗೆ ಯಾವಾಗಲೂ ಹೆಚ್ಚಿನ ಬೇಡಿಕೆ ಇರುತ್ತದೆ ಎಂದು ವಿಶ್ಲೇಷಿಸಿದ್ದಾರೆ.
ಹರಾಜಿನ ಇತಿಹಾಸ ಮತ್ತು ಗ್ರೀನ್ ಅವರ ಮಹತ್ವ
ಐಪಿಎಲ್ ಇತಿಹಾಸವನ್ನು ಗಮನಿಸಿದರೆ, ವಿಶೇಷವಾಗಿ ಮಿನಿ ಹರಾಜುಗಳಲ್ಲಿ, ವಿದೇಶಿ ಆಲ್ರೌಂಡರ್ಗಳು ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವುದು ಸ್ಪಷ್ಟವಾಗಿದೆ. ಬೆನ್ ಸ್ಟೋಕ್ಸ್, ಸ್ಯಾಮ್ ಕರನ್, ಮತ್ತು ಕ್ರಿಸ್ ಮೋರಿಸ್ ಅವರಂತಹ ಆಟಗಾರರು ಈ ಹಿಂದೆ ದಾಖಲೆ ಮೊತ್ತಕ್ಕೆ ಮಾರಾಟವಾಗಿದ್ದರು. ತಂಡಗಳು ತಮ್ಮ ಸಂಯೋಜನೆಯಲ್ಲಿನ ಸಣ್ಣಪುಟ್ಟ ಕೊರತೆಗಳನ್ನು ನೀಗಿಸಲು ಮಿನಿ ಹರಾಜಿನಲ್ಲಿ ಉತ್ತಮ ಗುಣಮಟ್ಟದ ಆಟಗಾರರಿಗಾಗಿ ದೊಡ್ಡ ಮೊತ್ತವನ್ನು ಖರ್ಚು ಮಾಡಲು ಹಿಂಜರಿಯುವುದಿಲ್ಲ. ಇದೇ ಪ್ರವೃತ್ತಿ 2026ರ ಮಿನಿ ಹರಾಜಿನಲ್ಲೂ ಮುಂದುವರಿಯಲಿದೆ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
ಅಶ್ವಿನ್ ಅವರ ಪ್ರಕಾರ, ಮಿನಿ ಹರಾಜಿನಲ್ಲಿ ಅನುಭವಿ ಭಾರತೀಯ ಆಟಗಾರರು ಲಭ್ಯವಿರುವುದು ಬಹಳ ಅಪರೂಪ. ಯಾವುದೇ ಫ್ರಾಂಚೈಸಿ ತನ್ನ ಪ್ರಮುಖ ಆಟಗಾರನನ್ನು ಹರಾಜಿಗೆ ಬಿಡುಗಡೆ ಮಾಡುವ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಹೀಗಾಗಿ, ತಂಡಗಳ ಗಮನವು ವಿದೇಶಿ ಆಟಗಾರರ ಮೇಲೆ, ಅದರಲ್ಲೂ ನಿರ್ದಿಷ್ಟವಾಗಿ ಆಲ್ರೌಂಡರ್ಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ. ಕ್ಯಾಮರೂನ್ ಗ್ರೀನ್ ಮತ್ತು ಮತ್ತೊಬ್ಬ ಆಸ್ಟ್ರೇಲಿಯಾದ ಆಲ್ರೌಂಡರ್ ಮಿಚೆಲ್ ಓವನ್ ಅವರಂತಹ ಆಟಗಾರರು ಹರಾಜಿಗೆ ಲಭ್ಯವಾದರೆ, ಅವರಿಗಾಗಿ ದೊಡ್ಡ ಪೈಪೋಟಿ ನಡೆಯಲಿದೆ ಎಂದು ಅಶ್ವಿನ್ ಹೇಳಿದ್ದಾರೆ.
“ಕ್ಯಾಮರೂನ್ ಗ್ರೀನ್ ಅವರಂತಹ ಆಟಗಾರರು ಹರಾಜಿಗೆ ಬಂದಾಗ, ಅವರಿಗಾಗಿ ಫ್ರಾಂಚೈಸಿಗಳು 25 ರಿಂದ 30 ಕೋಟಿ ರೂ. ಖರ್ಚು ಮಾಡಲು ಸಿದ್ಧವಿರುತ್ತವೆ. ಏಕೆಂದರೆ ಅವರು ವಿದೇಶಿ ಆಲ್ರೌಂಡರ್ಗಳಾಗಿದ್ದು, ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ” ಎಂದು ಅಶ್ವಿನ್ ವಿವರಿಸಿದ್ದಾರೆ. ಗಾಯದ ಕಾರಣದಿಂದಾಗಿ ಗ್ರೀನ್ ಮತ್ತು ಬೆನ್ ಸ್ಟೋಕ್ಸ್ ಹಿಂದಿನ ಕೆಲವು ಹರಾಜುಗಳಿಂದ ಹೊರಗುಳಿದಿದ್ದರು. ಇದೀಗ ಅವರು ಸಂಪೂರ್ಣ ಫಿಟ್ ಆಗಿ ಹರಾಜಿಗೆ ಲಭ್ಯವಾದರೆ, ಬೇಡಿಕೆ ಇನ್ನಷ್ಟು ಹೆಚ್ಚಾಗಲಿದೆ.
ಐಪಿಎಲ್ ಇತಿಹಾಸದ ದುಬಾರಿ ಆಟಗಾರರು
ಇತ್ತೀಚಿನ ವರ್ಷಗಳಲ್ಲಿ ಐಪಿಎಲ್ ಹರಾಜಿನಲ್ಲಿ ಆಟಗಾರರ ಮೌಲ್ಯ ಗಗನಕ್ಕೇರಿದೆ. 2025ರ ಹರಾಜಿನಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ತಂಡವು ರಿಷಭ್ ಪಂತ್ ಅವರನ್ನು 27 ಕೋಟಿಗೆ ರೂಪಾಯಿಗೆ ಖರೀದಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿಯೇ ಹೊಸ ದಾಖಲೆ ಬರೆಯಿತು. ಇದೇ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ 26.75 ಕೋಟಿ ರೂ.ಗೆ ಖರೀದಿಸಿತ್ತು. 2024ರ ಹರಾಜಿನಲ್ಲಿ ಮಿಚೆಲ್ ಸ್ಟಾರ್ಕ್ (24.75 ಕೋಟಿ, ಕೆಕೆಆರ್) ಮತ್ತು ಪ್ಯಾಟ್ ಕಮಿನ್ಸ್ (20.50 ಕೋಟಿ, ಎಸ್ಆರ್ಎಚ್) ದಾಖಲೆ ಮೊತ್ತಕ್ಕೆ ಮಾರಾಟವಾಗಿದ್ದರು. ಈ ಅಂಕಿಅಂಶಗಳನ್ನು ಗಮನಿಸಿದರೆ, ಮುಂದಿನ ಹರಾಜಿನಲ್ಲಿ ಕ್ಯಾಮರೂನ್ ಗ್ರೀನ್ ಅವರಂತಹ ಆಟಗಾರರು ಹೊಸ ದಾಖಲೆ ನಿರ್ಮಿಸಿದರೂ ಅಚ್ಚರಿಯಿಲ್ಲ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.



















