ಬೆಂಗಳೂರು: ಯಾವುದ್ಯಾವುದೋ ಹೆಸರುಗಳಲ್ಲಿ ಕರೆ ಮಾಡುವುದು, ಸಾಲ ಬೇಕೇ? ಕ್ರೆಡಿಟ್ ಕಾರ್ಡ್ ಅಪ್ರೂವ್ ಆಗಿದೆ ಅಂತ ತಲೆ ತಿನ್ನೋದು. ನಕಲಿ ಹೆಸರಿನಲ್ಲಿ ಕರೆ ಮಾಡಿ ಆನ್‌ಲೈನ್ ಮೂಲಕ ವಂಚನೆ ಮಾಡುವುದು ಸೇರಿ ಎಲ್ಲ ಚಟುವಟಿಕೆಗಳಿಗೆ ಇನ್ನುಮುಂದೆ ಅಂಕುಶ ಬೀಳಲಿದೆ. ಹೌದು, ಕರೆ ಮಾಡಿದವರ ನಿಜವಾದ ಹೆಸರು ಮೊಬೈಲ್ ಮೇಲೆ ಡಿಸ್ ಪ್ಲೇ ಆಗುವ ನೂತನ ವ್ಯವಸ್ಥೆ ಜಾರಿಗೆ ಬರಲಿದೆ. ಇದರಿಂದಾಗಿ ಗ್ರಾಹಕರಿಗೆ ಅನಗತ್ಯ ಕಿರಿಕಿರಿ, ಸೈಬರ್ ವಂಚನೆ ಆಗುವುದು ತಪ್ಪಲಿದೆ ಎಂದೇ ಹೇಳಲಾಗುತ್ತಿದೆ.
ಕರೆ ಮಾಡುವವರ ನಿಜವಾದ ಹೆಸರು ಪ್ರದರ್ಶಿಸುವ ವ್ಯವಸ್ಥೆ ಕುರಿತು ಭಾರತೀಯ ದೂರ ಸಂಪರ್ಕ ಇಲಾಖೆಯ (DoT) ಮಹತ್ವದ ಪ್ರಸ್ತಾವನೆಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (TRAI) ಅನುಮೋದನೆ ನೀಡಿದೆ. ಹಾಗಾಗಿ, ಶೀಘ್ರದಲ್ಲಿಯೇ ನಿಜವಾದ ಕಾಲರ್ ಐಡಿ ಕಾಣಿಸುವ ವ್ಯವಸ್ಥೆಯು ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.
ಇದುವರೆಗೆ ಕರೆ ಮಾಡಿರುವ ಅನಾಮಧೇಯ ವ್ಯಕ್ತಿಗಳು ಯಾರು ಎಂಬುದನ್ನು ಗುರುತಿಸಲು ಟ್ರೂ ಕಾಲರ್ ಸೇರಿ ಹಲವು ಥರ್ಡ್ ಪಾರ್ಟಿ ಆ್ಯಪ್ ಗಳನ್ನು ಬಳಸಬೇಕಿತ್ತು. ಇಲ್ಲಿಯೂ ನಕಲಿ ಹೆಸರುಗಳ ಹಾವಳಿಯನ್ನು ತಡೆಯಲು ಆಗಿರಲಿಲ್ಲ. ನಕಲಿ ಹೆಸರುಗಳ ಮೂಲಕ ದುರುಳರು ಜನರಿಗೆ ವಂಚಿಸುತ್ತಿದ್ದರು. ಈಗ ಸರ್ಕಾರದಿಂದಲೇ ಕಾಲರ್ ಐಡಿ ಪತ್ತೆಗೆ ಹೊಸ ವ್ಯವಸ್ಥೆ ಜಾರಿಗೆ ಬರುತ್ತಿದೆ.
ಕಾಲಿಂಗ್ ನೇಮ್ ಪ್ರೆಸೆಂಟೇಷನ್ (ಸಿ ಎನ್ ಪಿ) ವ್ಯವಸ್ಥೆ ಮೂಲಕ ಹೊಸ ಕಾಲರ್ ಐಡಿ ಗುರುತಿಸಲಾಗುತ್ತದೆ. ಯಾವುದೇ ವ್ಯಕ್ತಿ ಸಿಮ್ ಕಾರ್ಡ್ ಖರೀದಿಸುವಾಗಲೇ ಗುರುತಿನ ಚೀಟಿ ನೀಡಿರುತ್ತಾನೆ. ಇದರ ಎಲ್ಲ ಮಾಹಿತಿಯು ಟೆಲಿಕಾಂ ಕಂಪನಿಗಳ ಬಳಿ ಇರುತ್ತದೆ. ಅದೇ ಮಾಹಿತಿ ಆಧಾರದ ಮೇಲೆ ಕರೆ ಮಾಡುವ ವ್ಯಕ್ತಿಯ ಹೆಸರುಗಳನ್ನು ಮೊಬೈಲ್ ಡಿಸ್ ಪ್ಲೇ ಮೇಲೆ ಪ್ರದರ್ಶಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಬೆಳ್ಳಂ ಬೆಳಗ್ಗೆ ಕೆಟ್ಟು ನಿಂತ ಮೆಟ್ರೋ ರೈಲು | ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ, ಪ್ರಯಾಣಿಕರ ಪರದಾಟ!



















