ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗುತ್ತಿದ್ದು, ಸಿಬ್ಬಂದಿ ಕಿರುಕುಳಕ್ಕೆ ಹಲವರು ಆತ್ಮಹತ್ಯೆಯ ಹಾದಿ ಹಿಡಿದರೆ, ಹಲವರು ಊರು ತೊರೆದಿದ್ದಾರೆ. ಹೀಗಾಗಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದೆ.
ಈ ಮೂಲಕ ಮೈಕ್ರೊ ಫೈನಾನ್ಸ್ (Micro Finance) ಅಟ್ಟಹಾಸಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದ್ದು, ಸುಗ್ರೀವಾಜ್ಞೆ (Ordinance) ತರಲು ಸಚಿವ ಸಂಪುಟದಲ್ಲಿ ಮಸೂದೆಗೆ ಅನುಮೋದನೆ ಸಿಕ್ಕಿದೆ. ಮೈಕ್ರೋ ಫೈನಾನ್ಸ್ ಹಾವಳಿಗೆ ತಡೆ ತರುವ ನಿಟ್ಟಿನಲ್ಲಿ ಹೊಸದಾಗಿ ತರುವ ಮಸೂದೆಗೆ ಒಪ್ಪಿಗೆ ಸೂಚಿಸಲಾಗಿದೆ.
ಸುಗ್ರೀವಾಜ್ಞೆಗೆ ರಾಜ್ಯಪಾಲರ ಬಳಿ ಅಂಕಿತ ಪಡೆಯಲು ನಿರ್ಧರಿಸಲಾಗಿದೆ. ಮೈಕ್ರೋಫೈನಾನ್ಸ್ ವಿಚಾರದ ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ ಮತ್ತೊಂದು ಹಂತದ ಸಭೆ ನಡೆಯಲಿದೆ. ಕ್ಯಾಬಿನೆಟ್ ಸಿಎಂಗೆ ನಿರ್ಣಯ ಕೈಗೊಳ್ಳುವ ಪರಮಾಧಿಕಾರ ನೀಡಿದ್ದು, ಕೆಲವು ಅಂಶಗಳನ್ನು ಮಸೂದೆಯಲ್ಲಿ ಸೇರ್ಪಡೆ ಮಾಡಲು ತೀರ್ಮಾನಿಸಲಾಗಿದೆ. ಹೀಗಾಗಿ ಸಿಎಂ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ.
ಸಚಿವ ಸಂಪುಟದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ. ಪಾಟೀಲ್, ಫೈನಾನ್ಸ್ಗಳಿಗೆ ಕಡಿವಾಣ ಹಾಕಲು ಸುಗ್ರೀವಾಜ್ಞೆಗೆ ಸಂಪುಟ ಒಪ್ಪಿಗೆ ಸಿಕ್ಕಿದೆ.. ಅಮಾನವೀಯವಾಗಿ ಮೈಕ್ರೋ ಪೈನಾನ್ಸ್ನಿಂದ ಸಾಲ ವಸೂಲಿ ಆಗುತ್ತಿದೆ. ಇಂದು ಕೂಡ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿವೆ. ಮಸೂದೆ ತರಲು ತೀರ್ಮಾನಿಸಿ ಕೆಲವು ತಾಂತ್ರಿಕ ಅಂಶ ಚರ್ಚಿಸಿದ್ದೇವೆ. ಮತ್ತೊಂದು ಸಬೆ ನಡೆಸಿ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.