ಬೆಂಗಳೂರು : ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು (ಗುರುವಾರ) ಮಹತ್ವದ ಸಚಿವ ಸಂಪುಟ ಸಭೆ ನಡೆಯಿತು.
“ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು !”
*ಬೆಂಗಳೂರಿನ ದಾಸನಪುರ, ಕೋಲಾರ, ಮೈಸೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಸಾರ್ವಜನಿಕ – ಖಾಸಗಿ ಸಹಭಾಗಿತ್ವದಲ್ಲಿ 30 ಟಿಪಿಡಿ ಬಯೋ ಸಿಎನ್‌ಜಿ ಪ್ಲಾಂಟ್ ಬದಲಾಗಿ 50 ಟಿಪಿಡಿ ಬಯೋ ಸಿಎನ್‌ಜಿ ಪ್ಲಾಂಟ್ ಅನ್ನು ₹74.88 ಕೋಟಿಗಳ ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ನಿರ್ಧಾರ.
*ವಿಜಯಪುರ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲು ₹618.75 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.
*ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಪ್ರಜಾಸೌಧ, ತಾಲೂಕು ಆಡಳಿತ ಕೇ೦ದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಗತ್ಯವಿರುವ ₹16 ಕೋಟಿಗಳ ಪರಿಷ್ಕೃತ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ.
*ಗದಗ ಜಿಲ್ಲೆಯ ರೋಣ ತಾಲೂಕಿನ 9 ಸಣ್ಣ ನೀರಾವರಿ / ಜಿಲ್ಲಾ ಪಂಚಾಯತ್ ಕೆರೆಗಳಿಗೆ ಮಲಪ್ರಭಾ ಬಲದಂಡೆ ಕಾಲುವೆ ಚೈನೇಜ್ 129 ಕಿ.ಮೀ. ನಿಂದ ನೀರನ್ನು ಎತ್ತಿ ತುಂಬಿಸುವ ಯೋಜನೆಯನ್ನು ₹43.50 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
*ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕಾರ್ಡಿಯಾಕ್ ಯೂನಿಟ್ ಸ್ಥಾಪಿಸಲು ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ₹10.89 ಕೋಟಿ ಮೊತ್ತದಲ್ಲಿ ಖರೀದಿಸಲು ನಿರ್ಧಾರ.
*ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಿರ್ಮಿಸುತ್ತಿರುವ ಪ್ರಜಾಸೌಧ ಜಿಲ್ಲಾ ಆಡಳಿತ ಕೇಂದ್ರ ಕಟ್ಟಡದ ವಿಸ್ತರಣಾ ಕಾಮಗಾರಿಯ ₹55 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.
*ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ ತಾಲೂಕಿನ ಸರ್.ಎಂ.ವಿಶ್ವೇಶ್ವರಯ್ಯ ನಗರದಲ್ಲಿ ನಿರ್ಮಿಸುತ್ತಿರುವ ಛಲವಾದಿ ಸಮುದಾಯ ಭವನದ ₹22.33 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.
*ಗದಗ ಜಿಲ್ಲೆ ರೋಣ ವಿಭಾಗದಡಿ ಬರುವ ಮಲಪ್ರಭಾ ಬಲದಂಡೆ ಕಾಲುವೆಯ 56ಎ, 56ಬಿ, 56ಸಿ, 57 ಮತ್ತು ಇಟಗಿ ವಿತರಣಾ ಕಾಲುವೆಗಳ ಮೊದಲನೇ ಹಂತದ ಆಧುನೀಕರಣ ಕಾಮಗಾರಿಗಳನ್ನು 31.08 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
*90 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಅನುಷ್ಠಾನಗೊ೦ಡಿರುವ ಫಿಟ್ಟರ್ ಮತ್ತು ಎಲೆಕ್ನಿಷಿಯನ್ ವೃತ್ತಿಗಳಿಗೆ ಅಗತ್ಯವಿರುವ ಉಪಕರಣಗಳನ್ನು ₹50 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಿ ಒದಗಿಸಲು ತೀರ್ಮಾನ.
*ಕೋಲಾರ ಜಿಲ್ಲೆಯ ಬಂಗಾರಪೇಟೆ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಧಾರ. *ಯಾದಗಿರಿ ಜಿಲ್ಲೆಯ ಸುರಪುರ ತಾಲೂಕು ವ್ಯಾಪ್ತಿಯಲ್ಲಿನ ಕರ್ನಾಳ್ ಏತ ನೀರಾವರಿ ಯೋಜನೆಯ ₹50.75 ಕೋಟಿಗಳ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ.



















