ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಒಳ ಮೀಸಲಾತಿ ತೀರ್ಮಾನ ಸಾರ್ವಜನಿಕರ ಪರವಾಗಿಲ್ಲ. ಇದು ಕೇವಲ ರಾಜಕೀಯ ತೀರ್ಮಾನ ಆಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಛಲವಾದಿ, ಇಂತಹ ರಾಜಕೀಯ ತೀರ್ಮಾನ ಕೈಗೊಳ್ಳಲು ಒಂದು ವರ್ಷ ಕಾಯಬೇಕಿರಲಿಲ್ಲ. ಹಲವರನ್ನು ಬೀದಿಗಿಳಿಸಬೇಕಿರಲಿಲ್ಲ. ಈ ತೀರ್ಮಾನವನ್ನು ಯಾವತ್ತೋ ತೆಗೆದುಕೊಳ್ಳಬಹುದಾಗಿತ್ತು ಎಂದಿದ್ದಾರೆ.
ಈ ರೀತಿಯ ತೀರ್ಮಾನ ಕೈಗೊಳ್ಳುವ ವೇಳೆ ಮೂರು ಗುಂಪುಗಳಾಗಿ ವಿಂಗಡಿಸಿದ್ದೀರಿ, ಹಾಗಾದರೆ ಅಲೆಮಾರಿ ಹಾಗೂ “ಜಾತಿಗಳೇ ಇಲ್ಲದ ಜಾತಿಗಳನ್ನು ಯಾವುದಕ್ಕೆ ಸೇರಿಸುತ್ತೀರಿ” ?. ನಮ್ಮ ಸರ್ಕಾರ ಕೊಟ್ಟ ಮೀಸಲಾತಿಯನ್ನು ನೀವು ಲೇವಡಿ ಮಾಡಬೇಡಿ ಎಂದು ಹೇಳಿದ್ದಾರೆ.
ಅಂದು ನೀವು ಗೊಂದಲ ಸೃಷ್ಟಿಸಿ ಜನರನ್ನು ಎತ್ತಿ ಕಟ್ಟಿ, ಓಟ್ ಬ್ಯಾಂಕ್ ರಾಜಕೀಯ ಮಾಡಿ ಲಾಭ ಪಡೆದುಕೊಂಡು ಈಗ ನೀವು ಅದೇ ಶೇ. 17ರ ಆಧಾರದಲ್ಲಿ ತೀರ್ಮಾನ ಕೊಟ್ಟಿದ್ದೀರಿ. ನಿಮ್ಮ ಇಬ್ಬಗೆಯ ನೀತಿಯನ್ನು ನಾವು ಪ್ರಶ್ನೆ ಮಾಡುತ್ತೇವೆ. ಈ ಅಪವಾದವನ್ನು ಬಿಜೆಪಿಯ ಮೇಲೆ ಹೊರಿಸಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಬೇಕು ಎಂದು ತಿಳಿಸಿದ್ದಾರೆ.


















