ಬೆಂಗಳೂರು: ಜಾಗತಿಕ ವ್ಯವಸ್ಥೆಯ ಜತೆ ಸಾಗುವ ನಿಟ್ಟಿನಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಇನಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಇನ್ನು ವರ್ಷಕ್ಕೆ ಮೂರು ಬಾರಿ ಸಿಎ ಅಂತಿಮ ಹಂತದ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಈ ಮೊದಲು ಸಿಎ ಅಂತಿಮ ಹಂತದ ಪರೀಕ್ಷೆ ವರ್ಷಕ್ಕೆ ಎರಡು ಬಾರಿ ಮಾತ್ರ ನಡೆಯುತ್ತಿತ್ತು.
ಕಳೆದ ವರ್ಷ ಐಸಿಎಐ ಇಂಟರ್ಮಿಡಿಯೇಟ್ ಹಾಗೂ ಫೌಂಡೇಶನ್ ಹಂತದ ಪರೀಕ್ಷೆಯನ್ನು ವರ್ಷಕ್ಕೆ ಮೂರು ಬಾರಿ ನಡೆಸುವ ನಿರ್ಧಾರ ಕೈಗೊಂಡಿತ್ತು. ಈಗ ಸಿಎ ಅಂತಿಮ ಹಂತದ ಪರೀಕ್ಷೆಯನ್ನೂ 3 ಬಾರಿ ನಡೆಸಲು ತೀರ್ಮಾನ ಕೈಗೊಂಡಿದೆ. ಇದರಿಂದ ಈಗ ಸಿಎ ಪರೀಕ್ಷೆಯ ಫೌಂಡೇಶನ್, ಇಂಟರ್ಮಿಡಿಯೇಟ್ ಹಾಗೂ ಅಂತಿಮ ಎಲ್ಲಾ ಹಂತದ ಪರೀಕ್ಷೆಗೂ ಈಗ ಸಮಾನ ಅವಕಾಶ ಸಿಗಲಿದೆ. ಇದರಿಂದ ಸಿಎ ಆಕಾಂಕ್ಷಿಗಳಿಗೆ ಮತ್ತಷ್ಟು ಅವಕಾಶ ದೊರೆತಂತಾಗಿದೆ.
ಇದರ ಜತೆಗೆ ಪೋಸ್ಟ್ ಕ್ವಾಲಿಫಿಕೇಶನ್ ಕೋರ್ಸ್ (ಪಿಕ್ಯೂಸಿ) ಇನ್ಫಾರ್ಮೆಶನ್ ಸಿಸ್ಟೆಮ್ ಆಡಿಟ್ ನಲ್ಲಿಯೂ ಕೆಲವು ಬದಲಾವಣೆಗಳು ನಡೆಯಲಿವೆ . ಮೊದಲು ಜೂನ್ ಮತ್ತು ಡಿಸೆಂಬರ್ ಎರಡು ಬಾರಿ ನಡೆಯುತ್ತಿತ್ತು. ಈ ಕೋರ್ಸ್ಗಳ ಅಸೆಸ್ಮೆಂಟ್ ಪರೀಕ್ಷೆ ಇನ್ನು ಫೆಬ್ರವರಿ, ಜೂನ್ ಮತ್ತು ಡಿಸೆಂಬರ್ , ವರ್ಷದಲ್ಲಿ ಮೂರು ಬಾರಿ ನಡೆಯಲಿದೆ.
ಈ ಬಗ್ಗೆ ಮಾತನಾಡಿದ ಐಸಿಎಐ ಅಧ್ಯಕ್ಷೆ ಸಿಎ. ಚರಣ್ಜ್ಯೋತ್ ಸಿಂಗ್ ನಂದಾ “ ಈ ನಿರ್ಧಾರ ವಿದ್ಯಾರ್ಥಿಗಳು ಹಾಗೂ ಸದಸ್ಯರಿಗೆ ಸಹಕಾರಿಯಾಗಲಿದ್ದು, ಯಶಸ್ಸಿಗೆ ಮತ್ತಷ್ಟು ಅವಕಾಶವನ್ನು ನೀಡಲಿದೆ. ನಮ್ಮ ಭವಿಷ್ಯದ ಚಾರ್ಟಡ್ ಅಕೌಂಟ್ಗಳಿಗೆ ಈ ನಿರ್ಧಾರ ಉತ್ತಮ ಬೆಂಬಲ ನೀಡಲಿದೆ. ಐಸಿಎಐ ತನ್ನ ವಿದ್ಯಾರ್ಥಿ ಹಾಗೂ ಸದಸ್ಯರಿಗಾಗಿ 24/7 ಕಾರ್ಯನಿರ್ವಹಿಸುತ್ತಿದೆ. ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಲು ಐಸಿಎಐ ಸಾಕಷ್ಟು ಅವಕಾಶಗಳನ್ನು ನೀಡುತ್ತಿದೆ’ ಎಂದು ಹೇಳಿದರು.