ಬೆಂಗಳೂರು: ಬಾರೀ ಕುತೂಹಲಕ್ಕೆ ಕಾರಣವಾಗಿದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ ಕೊನೆಗೂ ಸೈನಿಕ, ಅಭಿಮನ್ಯುಗೆ ಸೋಲಿನ ರುಚಿ ತೋರಿಸಿದ್ದಾರೆ.
ಆರಂಭಿಕ ಮುನ್ನಡೆ ಕಾಯ್ದುಕೊಂಡಿದ್ದ ನಿಖಿಲ್ ಕುಮಾರಸ್ವಾಮಿ ಅವರನ್ನು ಹಿಂದಿಕ್ಕಿದ ಯೋಗೇಶ್ವರ್ ಭಾರೀ ಅಂತರ ಗೆಲುವು ದಾಖಲಿಸಿದ್ದಾರೆ. ಅಂಚೆ ಮತ ಎಣಿಕೆಯಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಸಿ ಪಿ ಯೋಗೇಶ್ವರ್ ಸಮಬಲ ಸಾಧಿಸಿದ್ದರು.
ತಲಾ 25 ಮತಗಳನ್ನು ಪಡೆದಿದ್ದರು. ನಿಖಿಲ್ ಕುಮಾರಸ್ವಾಮಿ ಮೊದಲ ಸುತ್ತಿನಲ್ಲಿ 5,075 ಮತಗಳನ್ನು ಪಡೆದರೆ, ಯೋಗೇಶ್ವರ್, 5,124 ಮತಗಳನ್ನು ಪಡೆದಿದ್ದರು. ನಂತರ ಅಭ್ಯರ್ಥಿ ಸಿ ಪಿ ಯೋಗೇಶ್ವರ್ 10,069 ಮತಗಳನ್ನು ಪಡೆದರೆ, ಜೆಡಿಎಸ್ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿ 10,204 ಮತ ಪಡೆದಿದ್ದರು.
ಆನಂತರ ಹಾವು ಏಣಿಯ ಆಟ ಶುರುವಾಯಿತು. ಮೂರನೇ ಸುತ್ತಿನ ಮತ ಎಣಿಕೆಯ ನಂತರ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ 14,460 ಮತಗಳನ್ನು ಪಡೆದರು. ನಿಖಿಲ್ ಕುಮಾರಸ್ವಾಮಿ 15,307 ಮತ ಪಡೆದಿದ್ದರು. ನಾಲ್ಕನೇ ಸುತ್ತಿನ ಮತ ಎಣಿಕೆ ಬಳಕ 20,676 ಮತ ಪಡೆದಿರುವ ನಿಖಿಲ್, 19,521 ಮತ ಪಡೆದಿರುವ ಯೋಗೇಶ್ವರ್ ಅವರನ್ನ ಹಿಂದಿಕ್ಕಿ ಅಲ್ಪಮೊತ್ತದ ಮುನ್ನಡೆ ಸಾಧಿಸಿದ್ದರು. ಕೊನೆಗೂ ಸಿ.ಪಿ. ಯೋಗೇಶ್ವರ್ ಭರ್ಜರಿ ಗೆಲುವು ಸಾಧಿಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.