ಬೈಂದೂರು: ವಾರಕ್ಕೊಮ್ಮೆ ಇರುವ 10215/10216 ಸಂಖ್ಯೆಯ ರೈಲಿಗೆ ʼಮೂಕಾಂಬಿಕಾ ಎಕ್ಸ್‌ಪ್ರೆಸ್ʼ ಎಂದು ಮರುನಾಮಕರಣ ಮಾಡಿ ಪ್ರತಿದಿನ ಸೇವೆ ನೀಡಬೇಕು ಎಂದು ಒತ್ತಾಯಿಸಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಾರೆ.
ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣದಲ್ಲಿ ಮೂಲ ಸೌಲಭ್ಯ ಅಭಿವೃದ್ಧಿ, ಬಿಜೂರು ರೈಲು ನಿಲ್ದಾಣ ಹಾಗೂ ಸೇನಾಪುರ ರೈಲ್ವೆ ನಿಲ್ದಾಣದಲ್ಲಿ ಪ್ರಾಯೋಗಿಕ ಮೆಮು, ಮತ್ಸ್ಯಗಂಧ ಹಾಗೂ ಪಂಚಗಂಗಾ ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ನೀಡುವಂತೆ ಸಂಸದರು ಕೇಂದ್ರ ರೈಲ್ವೇ ರಾಜ್ಯ ಖಾತೆಯ ಸಚಿವರನ್ನು ವಿನಂತಿಸಿಕೊಂಡಿದ್ದಾರೆ. ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಸಚಿವರು ಶೀಘ್ರದಲ್ಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುವುದಾಗಿ ಸಂಸದ ರಾಘವೇಂದ್ರ ತಿಳಿಸಿದ್ದಾರೆ.
ರೈಲ್ವೆ ಸಲಹಾ ಮಂಡಳಿಯ ಮಾಜಿ ಸದಸ್ಯ ಬೈಂದೂರಿನ ಕೆ. ವೆಂಕಟೇಶ್ ಕಿಣಿ ಈ ಸಂದರ್ಭದಲ್ಲಿ ಹಾಜರಿದ್ದರು.



















