ಬೆಂಗಳೂರು: ಇಂದು ರಾಜ್ಯದ ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಮತದಾರರು ಮತಗಟ್ಟೆಯತ್ತ ಧಾವಿಸುತ್ತಿದ್ದಾರೆ.
ರಾಜ್ಯದ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಇಂದ ಮತದಾನ ನಡೆಯಲಿದೆ. ಹೀಗಾಗಿ ಚುನಾವಣಾ ಆಯೋಗ ಭರ್ಜರಿ ತಯಾರಿ ಕೂಡ ಮಾಡಿದೆ. ಕ್ಷೇತ್ರಗಳಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಈಗಾಗಲೇ ಮೂರೂ ಕ್ಷೇತ್ರಗಳಲ್ಲಿ ಎಲ್ಲ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿವೆ. ಆರೋಪ -ಪ್ರತ್ಯಾರೋಪ, ತಂತ್ರ- ಪ್ರತಿತಂತ್ರಗಳನ್ನೆಲ್ಲ ನಾಯಕರು ಉರುಳಿಸಿದ್ದಾರೆ. ಆದರೆ, ಮತದಾರ ಮಾತ್ರ ಯಾರಿಗೆ ಮಣೆ ಹಾಕುತ್ತಾನೆ ಎಂಬುವುದನ್ನು ಕಾಯ್ದು ನೋಡಬೇಕು. ಇಂದು ಅಭ್ಯರ್ಥಿಗಳ ಹಣೆ ಬರಹವನ್ನು ಮತದಾರ ಬರೆಯಲಿದ್ದಾನೆ.
ಮೂರು ಕ್ಷೇತ್ರಗಳ ಪೈಕಿ ಈ ಬಾರಿ ಚನ್ನಪಟ್ಟಣ ಕ್ಷೇತ್ರ ಭಾರೀ ಸದ್ದು ಮಾಡಿದೆ. ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಿಂದ ಸಿ.ಪಿ. ಯೋಗೇಶ್ವರ್ ಸ್ಪರ್ಧೆ ಮಾಡಿದ್ದಾರೆ. ಆದರೆ, ಇದು ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಕುಮಾರಸ್ವಾಮಿಗೆ ಅವರಿಗೆ ಪ್ರತಿಷ್ಠೆಯ ಚುನಾವಣೆಯಾಗಿದೆ. ಅಲ್ಲದೇ, ಚನ್ನಪಟ್ಟಣದಲ್ಲಿ ಈ ಇಬ್ಬರೂ ಅಭ್ಯರ್ಥಿಗಳು ಸೇರಿದಂತೆ ಬರೋಬ್ಬರಿ 32 ಜನ ಕಣದಲ್ಲಿದ್ದಾರೆ.
ಚನ್ನಪಟ್ಟಣದಲ್ಲಿ ಒಟ್ಟು 2,32,949 ಮತದಾರರಿದ್ದು, ಈ ಪೈಕಿ 1,12,324 ಪುರುಷ ಮತದಾರರು, 1,20,617 ಮಹಿಳಾ ಮತದಾರರಿದ್ದಾರೆ. 8,338 ಯುವ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಚನ್ನಪಟ್ಟಣದಲ್ಲಿ ಒಕ್ಕಲಿಗ ಮತಗಳೇ ನಿರ್ಣಾಯಕ. 1.05 ಲಕ್ಷದಷ್ಟಿರುವ ಒಕ್ಕಲಿಗ ಮತದಾರರಿದ್ದಾರೆ. ಇನ್ನುಳಿದಂತೆ 40 ಸಾವಿರ ಎಸ್ಟಿ, 32 ಸಾವಿರ ಮುಸ್ಲಿಂ, 21 ಸಾವಿರ ಹಿಂದುಳಿದ ವರ್ಗ, 8 ಸಾವಿರ ಕುರುಬ, 10 ಸಾವಿರಕ್ಕೂ ಅಧಿಕ ಇತರ ಸಮುದಾಯದ ಮತಗಳು ಇವೆ.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ನಿಂದ ಯಾಸೀರ್ ಖಾನ್ ಪಠಾಣ್ ಸೇರಿದಂತೆ ಕಣದಲ್ಲಿ 8 ಅಭ್ಯರ್ಥಿಗಳಿದ್ದಾರೆ. ಶಿಗ್ಗಾಂವಿಯಲ್ಲಿ ಒಟ್ಟು 2,37,525 ಮತದಾರರಿದ್ದಾರೆ. ಈ ಪೈಕಿ ಪುರುಷರು 1,21,443 ಹಾಗೂ ಮಹಿಳೆಯರು 1,16,76 ಮತದಾರರಿದ್ದಾರೆ. ಇಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕ.. ಲಿಂಗಾಯತ 85 ಸಾವಿರ, ಮುಸ್ಲಿಂ 58 ಸಾವಿರ, ಕುರುಬ 27 ಸಾವಿರ, 52 ಸಾವಿರ ಎಸ್ಸಿ, ಎಸ್ಟಿ ಸೇರಿದಂತೆ ಇನ್ನಿತರ ಸಮುದಾಯದ 15 ಸಾವಿರ ಮತದಾರರು ಇದ್ದಾರೆ.
ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅನ್ನಪೂರ್ಣ ತುಕಾರಾಂ ಹಾಗೂ ಬಿಜೆಪಿಯ ಬಂಗಾರು ಹನುಮಂತು ಮಧ್ಯೆ ಪೈಪೋಟಿ ಇದೆ. ಇಲ್ಲಿ ಒಟ್ಟು 7 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಂಡೂರಿನಲ್ಲಿ ಒಟ್ಟು 2,36,100 ಮತದಾರರಿದ್ದು, ಈ ಪೈಕಿ 1,18,282 ಮಹಿಳಾ ಮತದಾರರು, 1,17,789 ಪುರುಷ ಮತದಾರರಿದ್ದಾರೆ. ಸಂಡೂರು ಕ್ಷೇತ್ರ ಮೀಸಲು ಎಸ್ಟಿ ಕ್ಷೇತ್ರವಾಗಿದೆ. ಹೀಗಾಗಿ ಇಲ್ಲಿ ಎಸ್ಟಿ ಮತದಾರರೇ ನಿರ್ಣಾಯಕ. ಇಲ್ಲಿ 68 ಸಾವಿರ ಎಸ್ಟಿ, 40 ಸಾವಿರ ಎಸ್ಸಿ, 38 ಸಾವಿರ ಲಿಂಗಾಯತ, 34 ಸಾವಿರ ಕುರುಬ, 20 ಸಾವಿರ ಮುಸ್ಲಿಂ ಮತಗಳು ಸೇರಿದಂತೆ 40 ಸಾವಿರ ಇನ್ನಿತರ ಸಮುದಾಯದ ಮತದಾರರು ಇದ್ದಾರೆ. ಇಂದು ಮತದಾನ ನಡೆಯಲಿದ್ದು, ನ. 23ಕ್ಕೆ ಫಲಿತಾಂಶ ಹೊರ ಬೀಳಲಿದೆ.