ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಿಎಂ ಸಿದ್ದರಾಮಯ್ಯಗೆ ಬಹಿರಂಗ ಪತ್ರ ಬರೆದಿದ್ದಾರೆ. ಅಲ್ಲದೇ, ಇಂದು ಉದಯಗಿರಿ ಘಟನೆ ಖಂಡಿಸಿ ನಡೆಯುತ್ತಿರುವ ಸಮಾವೇಶದಲ್ಲಿ ಭಾಗವಹಿಸಲು ತೆರಳುತ್ತಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವೈಫಲ್ಯಗಳ ಕುರಿತು ಸಿಎಂಗೆ ಪತ್ರ ಬರೆಯಲಾಗಿದೆ. ಸಿಎಂ ಮುಂದಿನ ಮುಂದಿನ ಬಜೆಟ್ ಮಂಡಿಸುತ್ತಿರೋ? ಇಲ್ಲವೋ ಗೊತ್ತಿಲ್ಲ. ಬೆಲೆ ಏರಿಕೆ, ಗ್ಯಾರಂಟಿ ಹಣ ತಲುಪದಿರುವುದು, ವಿವಿಗಳನ್ನು ಮುಚ್ಚುವುದು ಸೇರಿದಂತೆ ಸರ್ಕಾರದ ವೈಫಲ್ಯಗಳ ಬಗ್ಗೆ ಉಲ್ಲೇಖ ಮಾಡಿದ್ದೇನೆ ಎಂದಿದ್ದಾರೆ.
ಇತ್ತೀಚೆಗೆ ಮೈಸೂರಿನ ಉದಯಗಿರಿಯಲ್ಲಿ ಕೆಲ ದೇಶದ್ರೋಹಿಗಳು ಅಟ್ಟಹಸ ಮೆರೆದಿದ್ದಾರೆ. ಇವತ್ತು ಜಾಗೃತಿ ಜಾಥಾಗೆ ಕರೆ ನೀಡಲಾಗಿದೆ. ಕಾಂಗ್ರೆಸ್ ನಿಂದ ಕಳೆದೆರಡು ವರ್ಷಗಳಿಂದ ತುಷ್ಟೀಕರಣ ರಾಜಕಾರಣ ಮಾಡಲಾಗುತ್ತಿದೆ. ಇದನ್ನು ನೋಡಿದರೆ ನಿಜಾಮರ ಆಡಳಿತ ನೆನಪಾಗುತ್ತದೆ. ಈ ಸರ್ಕಾರ ನೋಡಿದರೆ ರಜಾಕಾರರ ಆಡಳಿತ ನಡೆಯುತ್ತಿದೆ ಏನೋ ಎಂಬ ಭಾವನೆ ಹಿಂದೂಗಳಿಗೆ ಬರುತ್ತಿದೆ. ಈ ಸರ್ಕಾರ ಪೊಲೀಸರಿಗೂ ಸ್ವಾತಂತ್ರ್ಯ ಕೊಟ್ಟಿಲ್ಲ. ಹೀಗಾಗಿ ಪೊಲೀಸ್ ಇಲಾಖೆ ಅಸಹಾಯಕವಾಗಿದೆ ಎಂದು ಆರೋಪಿಸಿದ್ದಾರೆ.
ಗೃಹ ಸಚಿವರು ತಮ್ಮ ರಾಜೀನಾಮೆ ನೀಡುವ ಕುರಿತು ಮಾತನಾಡಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ನಾವು ಕೂಡ ಇವತ್ತು ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಸರ್ಕಾರವನ್ನು ಎಚ್ಚರಿಸುತ್ತೇವೆ ಎಂದಿದ್ದಾರೆ.
ಮೈಸೂರಿನಲ್ಲಿ ನಿಷೇಧಾಜ್ಞೆ ಹೇರಿಕೆಗೆ ವಿಜಯೇಂದ್ರ ಖಂಡಿಸಿದ್ದಾರೆ. ಸರ್ಕಾರಕ್ಕೆ ತಾಕತ್, ಯೋಗ್ಯತೆ ಇದ್ದಿದ್ದರೆ ದೇಶದ್ರೋಹಿಗಳು ಕಲ್ಲೆಸೆದಾಗ ನಿಷೇಧಾಜ್ಞೆ ಹೇರಬೇಕಿತ್ತು. ಹಿಂದೂ ಕಾರ್ಯಕರ್ತರು ಹೋರಾಟ ಮಾಡ್ತೀವಿ ಅಂದಾಗ ನಿಷೇಧಾಜ್ಞೆ ಹೇರಿದ್ದಾರೆ. ಯಾಕೆ ಆವತ್ತು ಸರ್ಕಾರ, ಗೃಹ ಇಲಾಖೆ ಸತ್ತು ಹೋಗಿತ್ತಾ? ಏನೇ ಆದರೂ ನಾವು ಹೋರಾಟ ಮಾಡುತ್ತೇವೆ. ನಮ್ಮ ಹೋರಾಟ ತಡೆಯಲು ಏನೇ ನಿಷೇಧಾಜ್ಞೆ ಹಾಕಿದರೂ ಆಗಲ್ಲ. ಇವತ್ತು ಎಲ್ಲ ಹಿಂದೂಪರ ಸಂಘಟನೆಗಳ ಸದಸ್ಯರು ಭಾಗವಹಿಸುತ್ತಿದ್ದಾರೆ. ದುರುಳರು ಪೊಲೀಸ್ ಠಾಣೆಗೆ ಕಲ್ಲೆಸೆಯುವ, ಪೊಲೀಸರನ್ನೇ ಹೆದರಿಸುವ ಮಟ್ಟಕ್ಕೆ ಹೋಗಿದ್ದಾರೆ ಅಂದರೆ ರಾಜ್ಯದಲ್ಲಿ ಕಾನೂನು ಯಾವ ಮಟ್ಟಿಗೆ ಇದೆ ಎಂಬುವುದನ್ನು ಚಿಂತಿಸಬೇಕಿದೆ. ಹೀಗಾಗಿ ಅನಿವಾರ್ಯವಾಗಿ ಹಿಂದೂಗಳ ರಕ್ಷಣೆಗೆ ನಾವು ನಿಲ್ಲಬೇಕಿದೆ ಎಂದಿದ್ದಾರೆ.