ಚಿಕ್ಕಬಳ್ಳಾಪುರ: ರಾಜ್ಯ ಬಿಜೆಪಿಯ 23 ಸಂಘಟನಾತ್ಮಕ ಜಿಲ್ಲಾ ಘಟಕಗಳಿಗೆ ಅಧ್ಯಕ್ಷರನ್ನು ನೇಮಿಸಿ ಹೊರಡಿಸಿದ್ದಆದೇಶದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ನೇಮಕಕ್ಕೆ ಬಿಜೆಪಿ ಹೈಕಮಾಂಡ್ ತಡೆ ನೀಡಿದೆ. ನೇಮಕದ ಬೆನ್ನಲ್ಲೆ ಹಲವು ನಾಯಕರು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ವಿರುದ್ಧ ಕಿಡಿಕಾರಿದ್ದರು. ಚಿಕ್ಕಬಳ್ಳಾಪುರ ಸಂಸದ ಡಾ. ಕೆ ಸುಧಾಕರ್ (Dr K Sudhakar) ವಿಜಯೇಂದ್ರ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದರು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಸಂದೀಪ್ ರೆಡ್ಡಿ ನೇಮಕವನ್ನು ಸೋಮವಾರ ತಡೆ ಹಿಡಿಯಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ನೇಮಕದಲ್ಲಿ ವಿಜಯೇಂದ್ರ ನಮ್ಮನ್ನು ಪರಿಗಣಿಸಿಲ್ಲ, ನಮ್ಮೆಲ್ಲರನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ ಎಂದು ಸಂಸದ ಡಾ ಕೆ ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಅವರು ಜಿಲ್ಲಾಧ್ಯಕ್ಷ ಸಂದೀಪ್ ನೇಮಕಕ್ಕೆ ತಡೆ ನೀಡಿದ್ದಾರೆ.
ಈ ನೇಮಕ ತಡೆದ ಬಳಿಕ ಬಿವೈ ವಿಜೆಯೇಂದ್ರ ಅವರ ನಿರ್ಧಾರಕ್ಕೆ ಹಿನ್ನಡೆಯಾಗಿದೆ. ಸಿಡಿದೆದ್ದಿದ್ದ ಸಂಸದ ಡಾ ಕೆ ಸುಧಾಕರ್ ಮೇಲುಗೈ ಸಾಧಿಸಿದ್ದಾರೆ ಎಂಬ ಚರ್ಚೆಗಳು ಶುರುವಾಗಿವೆ.
ಸಂದೀಪ್ ರೆಡ್ಡಿ ಆಯ್ಕೆ ತಡೆ ಹಿಡಿದ ಹೈಕಮಾಂಡ್
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ಸಂದೀಪ್ ರೆಡ್ಡಿ ಆಯ್ಕೆಯನ್ನು ತಡೆ ಹಿಡಿದಿಯಲಾಗಿದೆ. ಸ್ಥಳೀಯವಾಗಿ ಸಾಕಷ್ಟು ನಾಯಕರು ಚಿಕ್ಕಬಳ್ಳಾಪುರದ ಹೊಸ ಅಧ್ಯಕ್ಷರ ವಿರುದ್ಧ ಆಕ್ರೋಶ ಹೊರಹಾಕಿದ್ದರು.