ಕುಂದಾಪುರ/ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಗಂಗೊಳ್ಳಿ-ಕುಂದಾಪುರ ಸೇತುವೆ ನಿರ್ಮಾಣ ಹಾಗೂ ಶಿಥಿಲವಾಗಿರುವ ಅರಾಟೆ ಸೇತುವೆ ಪುನರ್ ನಿರ್ಮಾಣಕ್ಕೆ ಮನವಿ ಮಾಡಿದ್ದಾರೆ.
ಬಹುಕಾಲದ ಬೇಡಿಕೆಯಾದ ಗಂಗೊಳ್ಳಿ-ಕುಂದಾಪುರ ಸೇತುವೆ ಪ್ರಸ್ತಾವನೆಗೆ ಅನುಮೋದನೆ ನೀಡಿ ಮಂಜೂರು ಮಾಡಲು ಕೋರಿದ್ದು, ಗಂಗೊಳ್ಳಿಯಿಂದ ಕುಂದಾಪುರ ಕೂಗಳತೆಯ ದೂರದಲ್ಲಿದ್ದರೂ ಸೇತುವೆಯ ಸಂಪರ್ಕವಿಲ್ಲದೆ ಸುಮಾರು 18 ಕಿ. ಮೀ ಸುತ್ತಿ ಬಳಸಿ ಕುಂದಾಪುರ ತಲುಪಬೇಕಾಗಿದೆ. ಇದರಿಂದ ಇಲ್ಲಿನ ಗ್ರಾಮಸ್ಥರಿಗೆ ತುರ್ತು ಆರೋಗ್ಯ ಸಮಸ್ಯೆಯ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಯಾಗುತ್ತಿದೆ. ಸೇತುವೆಯ ನಿರ್ಮಾಣದಿಂದ ವಾಣಿಜ್ಯ ವಹಿವಾಟಿಗೂ ಅನುಕೂಲಕರವಾಗಿ ಆರ್ಥಿಕತೆಗೆ ಬಲ ತುಂಬಲಿದೆ ಎಂದು ಮನವರಿಕೆ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-66 ರ ಅರಾಟೆ ಸೇತುವೆ ಶಿಥಿಲಗೊಂಡಿದ್ದು ಕಳೆದ ಹಲವಾರು ತಿಂಗಳಿನಿಂದ ಎಲ್ಲಾ ನಾಲ್ಕು ಪಥದಲ್ಲಿ ಸಂಚರಿಸಬೇಕಾದ ವಾಹನಗಳು ದ್ವಿಪಥದಲ್ಲಿ ಸಂಚಾರ ಮಾಡುತ್ತಿವೆ. ಇದರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಆದ್ದರಿಂದ ಆದಷ್ಟು ಶೀಘ್ರದಲ್ಲಿ ಹಳೆಯ ಅರಾಟೆ ಸೇತುವೆಯನ್ನು ಪುನರ್ ನಿರ್ಮಾಣ ಮಾಡಲು ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಲು ಮನವಿ ಮಾಡಿದ್ದಾರೆ.
ಬೈಂದೂರು ತಾಲೂಕು ಕಛೇರಿ ಬಳಿ ಅಂಡರ್ ಪಾಸ್ ನಿರ್ಮಿಸಲು ಹಾಗೂ ಒತ್ತಿನೆಣೆ ಶ್ರೀ ರಾಘವೇಂದ್ರ ಮಠದವರೆಗೆ ಸರ್ವಿಸ್ ರಸ್ತೆ ನಿರ್ಮಿಸಲು ಮನವಿ ಮಾಡಿದರು.
ಕೇಂದ್ರ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿ ಶೀಘ್ರದಲ್ಲಿ ಎಲ್ಲಾ ಮನವಿಗಳನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುವುದಾಗಿ ಸಂಸದ ರಾಘವೇಂದ್ರ ತಿಳಿಸಿದ್ದಾರೆ.