ಬೆಂಗಳೂರು: ಅನಾಮಧೇಯ ವ್ಯಕ್ತಿಗಳು ಕರೆ ಮಾಡಿ ಒಟಿಪಿ ಕೇಳುತ್ತಾರೆ. ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಿ, ದುಡ್ಡು ಕೊಡಿ ಎಂದು ವಂಚಿಸುತ್ತಾರೆ. ಷೇರು ಮಾರುಕಟ್ಟೆಯಲ್ಲಿ ನಿಮ್ಮ ಹಣ ಡಬಲ್ ಮಾಡಿಕೊಡುತ್ತೇವೆ ಎಂದು ಪಂಗನಾಮ ಹಾಕುತ್ತಾರೆ. ಸೈಬರ್ ವಂಚನೆಯು ಇಂತಹ ಹಲವು ಮುಖಗಳನ್ನು ಹೊಂದಿದೆ. ಇವುಗಳ ಜತೆಗೆ ಈಗ ಸಾಮಾನ್ಯ ಜನರ ಹೆಸರಿನಲ್ಲಿ ನಕಲಿ ಸಿಮ್ ಕಾರ್ಡ್ ಖರೀದಿಸಿ, ಸೈಬರ್ ಕ್ರೈಮ್ ಎಸಗುವ ಪ್ರಕರಣಗಳು ಸುದ್ದಿಯಾಗುತ್ತಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರವು ಜನರಿಗೆ ಹಲವು ಸೂಚನೆಗಳನ್ನು ನೀಡಿದೆ.
ಹೌದು, ಜನರ ಆಧಾರ್, ವೋಟರ್ ಐಡಿ ಸೇರಿ ಹಲವು ದಾಖಲೆಗಳ ಮೂಲಕ ನಕಲಿ ಸಿಮ್ ಕಾರ್ಡ್ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ, ಜನರು ಇಂತಹ ನಕಲಿ ದಾಖಲೆಗಳ ಜಾಲದಲ್ಲಿ ಸಿಗಬಾರದು ಎಂದು ಕೇಂದ್ರ ಸರ್ಕಾರದ ಟೆಲಿಕಮ್ಯುನಿಕೇಷನ್ಸ್ ಇಲಾಖೆಯು ಹಲವು ಸೂಚನೆಗಳು ಇರುವ ವೀಡಿಯೋವನ್ನು ಪೋಸ್ಟ್ ಮಾಡಿದೆ. ಜನರು ತಮ್ಮ ಹೆಸರಿನಲ್ಲಿ ಇರುವ ನಕಲಿ ಸಿಮ್ ಕಾರ್ಡ್ ಗಳನ್ನೂ ಈಗ ಬ್ಲಾಕ್ ಮಾಡಬಹುದಾಗಿದೆ.
ನಕಲಿ ಸಿಮ್ ಗುರುತಿಸಿ, ಬ್ಲಾಕ್ ಮಾಡಿ
- ಕೇಂದ್ರ ಸರ್ಕಾರದ ಸಂಚಾರ್ ಸಾಥಿ ಪೋರ್ಟಲ್ ಅಥವಾ ಆ್ಯಪ್ ಗೆ ಭೇಟಿ ನೀಡಿ
- Know Mobile Connections in Your Name ಎಂಬ ಆಪ್ಶನ್ ಮೇಲೆ ಕ್ಲಿಕ್ ಮಾಡಿ
- ಆಗ TAFCOP ಎಂಬ ಹೊಸ ವಿಂಡೋ ಓಪನ್ ಆಗುತ್ತದೆ
- ನಿಮ್ಮ ಮೊಬೈಲ್ ನಂಬರ್ ನಮೂದಿಸಿ, ಕ್ಯಾಪ್ಚಾ ಹಾಕಿ
- ನಿಮ್ಮ ಮೊಬೈಲ್ ನಂಬರ್ ಗೆ ಬಂದ ಒಟಿಪಿ ನಮೂದಿಸಿ
- ಆಗ ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್ ಗಳ ಪಟ್ಟಿ ಕಾಣುತ್ತದೆ
ಬ್ಲಾಕ್ ಮಾಡುವುದು ಹೇಗೆ?
ನಿಮ್ಮ ಹೆಸರಿನಲ್ಲಿ ಅನಾಮಧೇಯ ವ್ಯಕ್ತಿಗಳು ಸಿಮ್ ಕಾರ್ಡ್ ಪಡೆದಿದ್ದರೆ, ಅವುಗಳನ್ನು ಬ್ಲಾಕ್ ಮಾಡಿಸಬಹುದು. ಸಂಚಾರ್ ಸಾಥಿ ಆ್ಯಪ್ ನಲ್ಲಿ ನಾಟ್ ರಿಕ್ವೈರ್ಡ್ ಎಂಬ ಆಯ್ಕೆಮಾಡಿಕೊಳ್ಳುವ ಮೂಲಕ ಬ್ಲಾಕ್ ಮಾಡಿಸಬಹುದಾಗಿದೆ. ನೀವು ನಕಲಿ ಸಿಮ್ ಕಾರ್ಡ್ ಬಗ್ಗೆ ಮಾಹಿತಿ ನೀಡಿದರೆ, ಟೆಲಿಕಮ್ಯುನಿಕೇಷನ್ಸ್ ಇಲಾಖೆ ಹಾಗೂ ಟೆಲಿಕಾಂ ಕಂಪನಿಗಳು ಆ ಸಿಮ್ ಕಾರ್ಡ್ ಹೊಂದಿದವರ ವಿರುದ್ಧ ಕ್ರಮವನ್ನೂ ತೆಗೆದುಕೊಳ್ಳುತ್ತವೆ.
ನಕಲಿ ಸಿಮ್ ಕಾರ್ಡ್ ಗಳ ಮೂಲಕ ಯಾವುದೋ ಅಪರಾಧ ಎಸಗಲು ಸಂಚು ರೂಪಿಸಬಹುದು. ಬೇರೆಯವರಿಗೆ ಲಕ್ಷಾಂತರ ರೂ. ವಂಚಿಸಬಹುದು. ಇಂತಹ ಪ್ರಕರಣಗಳು ಬಯಲಾದಾಗ ತಪ್ಪೇ ಮಾಡದ ಜನ ಕಷ್ಟಕ್ಕೆ ಸಿಲುಕುತ್ತಾರೆ. ಹೀಗಾಗಬಾರದು ಎಂದರೆ ಟೆಲಿಕಮ್ಯುನಿಕೇಷನ್ಸ್ ಇಲಾಖೆಯ ವೆಬ್ ಪೋರ್ಟಲ್ ಆಗಿರುವ https://sancharsaathi.gov.in/ ಗೂ ಭೇಟಿ ನೀಡಿ, ನಕಲಿ ಸಿಮ್ ಬ್ಲಾಕ್ ಮಾಡಿಸಬಹುದು.