ಬೆಂಗಳೂರು: ಉದ್ಯಮಿ ಮನೋಜ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಪುಟ್ಟೇನಹಳ್ಳಿ ಬಳಿ ರೌಡಿಶೀಟರ್ ಯಶಸ್ವಿನಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಯಶಸ್ವಿನಿ, ಅಪಹರಣ ಆರೋಪಿಗಳಾದ ಬೇಕರಿ ರಘು ಗ್ಯಾಂಗ್‌ಗೆ ಸಹಕಾರ ನೀಡಿದ್ದ ಆರೋಪ ಎದುರಿಸುತ್ತಿದ್ದಳು. ನಿರ್ದೇಶಕ ನಂದಕಿಶೋರ್‌ಗೆ ಫೈನಾನ್ಸ್ ಮಾಡಿದ್ದ ವಿಚಾರದಲ್ಲಿ ಉದ್ಯಮಿ ಮನೋಜ್‌ರನ್ನು ಗುರಿಯಾಗಿಸಿಕೊಂಡು ಬೇಕರಿ ರಘು ಗ್ಯಾಂಗ್ ಅಪಹರಣ ನಡೆಸಿತ್ತು ಎಂಬ ಆರೋಪ ಕೇಳಿಬಂದಿತ್ತು.
ಈ ಪ್ರಕರಣದಲ್ಲಿ ಈಗಾಗಲೇ ಬೇಕರಿ ರಘು, ವೆಂಕಟೇಶ್, ರಾಜೇಶ್ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಬೇಕರಿ ರಘು ಬಂಧನದ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪವೂ ದಾಖಲಾಗಿತ್ತು. ಜೊತೆಗೆ, ಬೇಕರಿ ರಘು ಎಸ್ಕೇಪ್ ಆಗಲು ಸಹಾಯ ಮಾಡಿದ್ದ ಆರೋಪ ಯಶಸ್ವಿನಿ ಮೇಲೆ ಇತ್ತು. ಇದೀಗ ಸಿಸಿಬಿ ಪೊಲೀಸರು ಯಶಸ್ವಿನಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆಯನ್ನು ಸಿಸಿಬಿ ಮುಂದುವರಿಸಿದೆ.
ಇದನ್ನೂ ಓದಿ : ಸ್ಕೂಟಿಗೆ ಡಿಕ್ಕಿಯಾಗಿ ಸಹಸವಾರೆಯ ಮೇಲೆಯೇ ಹರಿದ ಬಸ್ | ಯುವತಿ ಸಾವು



















