ಬೆಂಗಳೂರು: ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ವಿಶೇಷ ತನಿಖಾ ತಂಡ (ಎಸ್‌ಐಟಿ) ಐಟಿ ಅಧಿಕಾರಿಗಳಿಗೆ ಬೆಂಗಳೂರು ಬಿಟ್ಟು ತೆರಳದಂತೆ ಸೂಚನೆ ನೀಡಿದೆ.
ಐ.ಆರ್.ಎಸ್ ಅಧಿಕಾರಿ ಕೃಷ್ಣ ಪ್ರಸಾದ್ ನೇತೃತ್ವದ ತಂಡ ಸಿಜೆ ರಾಯ್ ಅವರ ಸಂಸ್ಥೆಗಳ ಮೇಲೆ ದಾಳಿ ನಡೆಸಿತ್ತು. ಈ ದಾಳಿಯ ಬಳಿಕ ಐಟಿ ಅಧಿಕಾರಿಗಳ ಕಿರುಕುಳದಿಂದಲೇ ಆತ್ಮಹತ್ಯೆ ನಡೆದಿದೆ ಎಂಬ ಆರೋಪಗಳು ಕೇಳಿಬಂದಿರುವ ಹಿನ್ನೆಲೆ, ಎಸ್‌ಐಟಿ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ವಿಸ್ತರಿಸಿದ್ದಾರೆ.
ಈ ಸಂಬಂಧ ಐಟಿ ಅಧಿಕಾರಿಗಳನ್ನು ಈಗಾಗಲೇ ವಿಚಾರಣೆ ನಡೆಸಿ ಮಾಹಿತಿ ಕಲೆಹಾಕಿರುವ ಪೊಲೀಸರು, ಎಸ್‌ಐಟಿ ಅನುಮತಿ ಇಲ್ಲದೆ ಬೆಂಗಳೂರು ತೊರೆಯಬಾರದು ಎಂದು ಸೂಚಿಸಿದ್ದಾರೆ. ಅಗತ್ಯವಿದ್ದಲ್ಲಿ ಮತ್ತೆ ವಿಚಾರಣೆಗೆ ಕರೆಯಲಾಗುವುದು ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ, ಸಿಜೆ ರಾಯ್ ಅವರ ಕುಟುಂಬಸ್ಥರು ಹಾಗೂ ಕಾನ್ಪಿಡೆಂಟ್ ಗ್ರೂಪ್ ಸಿಬ್ಬಂದಿಯನ್ನು ಕೂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವ್ಯವಹಾರಿಕ, ವೈಯಕ್ತಿಕ ಕಾರಣಗಳು ಹಾಗೂ ಐಟಿ ಕಿರುಕುಳ ಆರೋಪ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಏರ್ಪೋರ್ಟ್ ರಸ್ತೆಯಲ್ಲಿ ಅಪಘಾತ ಹೆಚ್ಚಳ | ಜಾಗೃತಿ ಮೂಡಿಸಲು ಬಂದ ಯಮರಾಜ



















