ಜಮ್ಮು: ಕಾತ್ರಾದ ಪ್ರಸಿದ್ಧ ಮಾತಾ ವೈಷ್ಣೋದೇವಿ ದೇವಾಲಯದಿಂದ ದೆಹಲಿಗೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್‌ವೊಂದು ಜಮ್ಮುವಿನ ಮಂಡಾ ಎಂಬಲ್ಲಿ 30 ಅಡಿ ಆಳದ ಕಮರಿಗೆ ಬಿದ್ದ ಪರಿಣಾಮ ಬಸ್ ಚಾಲಕ ಮೃತಪಟ್ಟಿದ್ದು, ಕನಿಷ್ಠ 17 ಮಂದಿ ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯನ್ನು ಹಿಮಾಚಲ ಪ್ರದೇಶದ ರಾಕೇಶ್ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಬಸ್ ನಿಲ್ದಾಣದಿಂದ ಸುಮಾರು ಎಂಟು ಕಿಲೋಮೀಟರ್ ದೂರದ ಮಂಡಾ ಎಂಬಲ್ಲಿ ಈ ಅವಘಡ ಸಂಭವಿಸಿದೆ. ದೊಡ್ಡ ತಿರುವು ತೆಗೆದುಕೊಳ್ಳುವ ವೇಳೆ ಬಸ್, ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯಿಂದ ಜಾರಿ ಕಮರಿಗೆ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ದೊರೆತ ಕೂಡಲೇ ಜಮ್ಮು ಪೊಲೀಸರು, ರಾಜ್ಯ ವಿಪತ್ತು ಪ್ರತಿಕ್ರಿಯೆ ತಂಡ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದವು. ಬಸ್ಸಿನಲ್ಲಿದ್ದ ಎಲ್ಲಾ 17 ಪ್ರಯಾಣಿಕರನ್ನು ಮೇಲಕ್ಕೆತ್ತಿ ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸಾಗಿಸಲಾಯಿತು. ಗಾಯಗೊಂಡವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಚಾಲಕನ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, “ಕಾತ್ರಾದಿಂದ ದೆಹಲಿಗೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮಂಡಾದಲ್ಲಿ ಅಪಘಾತಕ್ಕೀಡಾಗಿರುವ ಸುದ್ದಿ ಕೇಳಿ ತೀವ್ರ ದುಃಖಿತನಾಗಿದ್ದೇನೆ. ಈ ದುರಂತದಲ್ಲಿ ಪ್ರಾಣ ಕಳೆದುಕೊಂಡ ಚಾಲಕನ ಕುಟುಂಬಕ್ಕೆ ಸಂತಾಪಗಳನ್ನು ಹೇಳಬಯಸುತ್ತೇನೆ. ಅದೃಷ್ಟವಶಾತ್, ಗಾಯಗೊಂಡ ಎಲ್ಲಾ ಪ್ರಯಾಣಿಕರ ಆರೋಗ್ಯವೂ ಸ್ಥಿರವಾಗಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಮತ್ತು ವೈದ್ಯಕೀಯ ಆರೈಕೆ ಪಡೆಯುತ್ತಿದ್ದಾರೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಘಟನೆಗೆ ತ್ವರಿತವಾಗಿ ಸ್ಪಂದಿಸಿದ ರಕ್ಷಣಾ ತಂಡಗಳು ಮತ್ತು ಅಧಿಕಾರಿಗಳಿಗೆ ಕೃತಜ್ಞತೆಗಳು” ಎಂದು ಹೇಳಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರೂ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ಜಮ್ಮುವಿನ ಮಂಡಾದಲ್ಲಿ ನಡೆದ ರಸ್ತೆ ಅಪಘಾತ ದುಃಖಕರ. ಈ ನೋವಿನ ಸಮಯದಲ್ಲಿ, ಪ್ರಾಣ ಕಳೆದುಕೊಂಡ ಚಾಲಕನ ಕುಟುಂಬಕ್ಕೆ ಸಂತಾಪ ಹೇಳುತ್ತೇನೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಆಶಿಸುತ್ತೇನೆ. ಗಾಯಗೊಂಡ ಯಾತ್ರಾರ್ಥಿಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವಂತೆ ನಾನು ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.