2024ರ ಟಿ20 ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ತೋರಿದ ಅನುಭವಿ ಬೌಲರ್ ಜಸ್ಪ್ರೀತ್ ಬುಮ್ರಾ ಹಾಗೂ ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ ಐಸಿಸಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬುಮ್ರಾ ಅದ್ಭುತ ಪ್ರದರ್ಶನ ನೀಡುವ ಮೂಲಕ ಟಿ20 ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಪ್ರದರ್ಶನಕ್ಕಾಗಿ ಐಸಿಸಿಯಿಂದ ಪಂದ್ಯಾವಳಿಯ ಆಟಗಾರ ಪ್ರಶಸ್ತಿಯನ್ನು ಸಹ ಪಡೆದರು. ಈಗ ಬುಮ್ರಾ, ಐಸಿಸಿ ಜೂನ್ ತಿಂಗಳ ಆಟಗಾರ ಗೌರವಕ್ಕೆ ಭಾಜನರಾಗಿದ್ದಾರೆ.
ಬುಮ್ರಾ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಪಡೆದ ಎರಡನೇ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಬುಮ್ರಾಗೂ ಮೊದಲು ಈ ಗೌರವವನ್ನು ಭುವನೇಶ್ವರ್ ಕುಮಾರ್ ಸ್ವೀಕರಿಸಿದ್ದರು. ಜನವರಿ 2021 ರಲ್ಲಿ ಈ ಪ್ರಶಸ್ತಿಯನ್ನು ಭುವನೇಶ್ವರ್ ಪಡೆದಿದ್ದಾರೆ. ಈಗ ಈ ಪಟ್ಟಿಯಲ್ಲಿ ಬುಮ್ರಾ ಹೆಸರು ಸೇರಿಕೊಂಡಿದೆ.

2024 ರ ಟಿ20 ವಿಶ್ವಕಪ್ ನಲ್ಲಿ ಜಸ್ಪ್ರೀತ್ ಬುಮ್ರಾ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಆಗಿ ಆಯ್ಕೆಯಾಗಿದ್ದರು. ಪಂದ್ಯಾವಳಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದರು. ಬುಮ್ರಾ ಆಡಿದ 8 ಪಂದ್ಯಗಳಲ್ಲಿ 8.27 ರ ಸರಾಸರಿಯಲ್ಲಿ 15 ವಿಕೆಟ್ ಪಡೆದು ಮಿಂಚಿದ್ದರು. 29.4 ಓವರ್‌ಗಳನ್ನು ಬೌಲ್ ಮಾಡಿ ಕೇವಲ 4.18 ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟ ಸಾಧನೆ ಮಾಡಿದ್ದಾರೆ.
ಪ್ರಶಸ್ತಿ ಗೆದ್ದ ನಂತರ ಈ ಬಗ್ಗೆ ಪ್ರತಿಕ್ರಿಯಿಸಿರುವ ಜಸ್ಪ್ರೀತ್ ಬುಮ್ರಾ, ಈ ಪ್ರಶಸ್ತಿ ಗೆದ್ದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನನಗೆ ಅದೃಷ್ಟದ ವಿಷಯವಾಗಿದ್ದು, ಕೆಲವು ವಾರಗಳು ನನಗೆ ಬಹಳ ಸ್ಮರಣೀಯ ಎಂದು ಹೇಳಿದ್ದಾರೆ. ಮಹಿಳಾ ಆಟಗಾರ್ತಿಯರ ಪಟ್ಟಿಯಲ್ಲಿ ಭಾರತೀಯ ತಂಡದ ಓಪನರ್ ಸ್ಮೃತಿ ಮಂಧಾನ ಕೂಡ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಮಹಿಳಾ ಕ್ರಿಕೆಟ್ ತಂಡದ ಅನುಭವಿ ಆಟಗಾರ್ತಿ ಮಂಧಾನಾಗೆ ಐಸಿಸಿ ಜೂನ್ ತಿಂಗಳ ಆಟಗಾರ್ತಿ ಪ್ರಶಸ್ತಿ ನೀಡಿ ಗೌರವಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಈ ಪ್ರಶಸ್ತಿ ಬಂದಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಏಕದಿನ ಪಂದ್ಯಗಳಲ್ಲಿ ಸ್ಮೃತಿ ಕ್ರಮವಾಗಿ 117, 136, 90 ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಅವರು ಪ್ಲೇಯರ್ ಆಫ್ ದಿ ಸಿರೀಸ್ ಪ್ರಶಸ್ತಿ ಪಡೆದಿದ್ದಾರೆ. ಏಕೈಕ ಟೆಸ್ಟ್ ಪಂದ್ಯದಲ್ಲಿ ಸ್ಮೃತಿ 149 ರನ್ ಗಳ ಅದ್ಭುತ ಇನ್ನಿಂಗ್ಸ್ ಕಟ್ಟಿದ್ದರು. ಟಿ20 ಪಂದ್ಯದಲ್ಲಿ ಕೂಡ ಉತ್ತಮ ಪ್ರದರ್ಶನ ತೋರಿದ್ದರು. ಹೀಗಾಗಿ ಈ ಪ್ರಶಸ್ತಿ ಲಭಿಸಿದೆ.
