ಕೋಲ್ಕತ್ತಾ | ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇಂದಿನಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡುತ್ತಿವೆ. ಇದರ ಭಾಗವಾಗಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಮೊದಲ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದುಕೊಂಡ ದಕ್ಷಿಣ ಆಫ್ರಿಕಾ ನಾಯಕ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು.
ದಕ್ಷಿಣ ಆಫ್ರಿಕಾ 16 ಓವರ್‌ಗಳಲ್ಲಿ 71 ರನ್ ಗಳಿಸಿ ಪ್ರಮುಖ 3 ವಿಕೆಟ್ಗಳನ್ನು ಕಳೆದುಕೊಂಡಿದೆ. ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಇಬ್ಬರು ಆರಂಭಿಕರನ್ನು ಪೆವಿಲಿಯನ್‌ಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬುಮ್ರಾ ಎಸೆದ 10.3ನೇ ಓವರ್ನಲ್ಲಿ ರಿಯಾನ್ ರಿಕಲ್ಟನ್ (23ರನ್, 22 ಎಸೆತ, 4 ಬೌಂಡರಿ) ಕ್ಲೀನ್ ಬೌಲ್ಡ್ ಆದರು. ಇದರೊಂದಿಗೆ ಹರಿಣ ತಂಡ 57 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು.
ನಂತರ, ಬುಮ್ರಾ 12ನೇ ಓವರ್ನ ಮೊದಲ ಎಸೆತದಲ್ಲಿ ಐಡೆನ್ ಮಾರ್ಕ್ರಾಮ್ (31 ರನ್, 48 ಎಸೆತ, 5 ಬೌಂಡರಿ, 1 ಸಿಕ್ಸರ್) ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ಕ್ಯಾಚಿತ್ತರು. ಇದರೊಂದಿಗೆ ದಕ್ಷಿಣ ಆಫ್ರಿಕಾ 62 ರನ್‌ಗಳಿಗೆ ಎರಡನೇ ವಿಕೆಟ್ ಕಳೆದುಕೊಂಡಿತು. ನಂತರ, ತಂಡದ ನಾಯಕ ಟೆಂಬಾ ಬವುಮಾ (3 ರನ್; 11 ಎಸೆತಗಳು) ಕುಲ್ದೀಪ್ ಯಾದವ್ ಎಸೆದ 15.6ನೇ ಓವರ್ನಲ್ಲಿ ಕ್ಯಾಚ್ ನೀಡಿ ಕ್ರೀಸ್ ತೊರೆದರು. ಇದರೊಂದಿಗೆ, ಮೂರನೇ ವಿಕೆಟ್ 71 ರನ್‌ಗಳಿಗೆ ಪತನವಾಯಿತು. ಭೋಜನ ವಿರಾಮದ ವೇಳೆಗೆ ಹರಿಣ ತಂಡ 27 ಓವರ್ಗೆ 3 ವಿಕೆಟ್ ಕಳೆದುಕೊಂಡು 105 ರನ್ ಗಳಿಸಿದೆ.
ಅಶ್ವಿನ್ ದಾಖಲೆ ಉಡೀಸ್ ಮಾಡಿದ ಯಾರ್ಕರ್ ಕಿಂಗ್
ಮೊದಲ ಟೆಸ್ಟ್ನಲ್ಲಿ ರಯಾನ್ ರಿಕಲ್ಟನ್ ವಿಕೆಟ್ ಪಡೆಯುತ್ತಿದ್ದಂತೆ ಬುಮ್ರಾ ಅಪರೂಪದ ದಾಖಲೆ ಬರೆದಿದ್ದು, ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಬಾರಿ ಕ್ಲೀನ್ ಬೋಲ್ಡ್ ಮಾಡಿದ ಭಾರತದ ಮೂರನೇ ಬೌಲರ್ ಎನಿಸಿಕೊಂಡರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈವರೆಗೆ ಬುಮ್ರಾ 152 ಬಾರಿ ಕ್ಲೀನ್ ಬೋಲ್ಡ್ ಮಾಡಿ ವಿಕೆಟ್ ಪಡೆದಿದ್ದಾರೆ. ಇದರೊಂದಿಗೆ ಆರ್.ಅಶ್ವಿನ್ (151 ಬಾರಿ) ಅವರನ್ನು ಹಿಂದಿಕ್ಕಿದರು.
ಇದನ್ನೂ ಓದಿ : ರಾಮನಗರ | ಹಳೆ ದ್ವೇಷಕ್ಕೆ ಯುವಕನ ಬರ್ಬರ ಹತ್ಯೆ



















