ವಾಷಿಂಗ್ಟನ್ : ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್ (Alphabet) ತನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸುಂದರ್ ಪಿಚೈ ಅವರ ವೇತನವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಿದೆ. ಮುಂದಿನ 3 ವರ್ಷಗಳ ಅವಧಿಗೆ ಅವರ ಒಟ್ಟು ಸಂಭಾವನೆಯನ್ನು ಬರೋಬ್ಬರಿ 692 ಮಿಲಿಯನ್ ಡಾಲರ್‌ಗಳಿಗೆ (ಸುಮಾರು 6,361 ಕೋಟಿ ರೂಪಾಯಿ) ಏರಿಕೆ ಮಾಡಲಾಗಿದ್ದು, ಇದರೊಂದಿಗೆ ಅವರು ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕಾರ್ಪೊರೇಟ್ ನಾಯಕರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.
ಷೇರುಗಳ ರೂಪದಲ್ಲಿ ಸಿಗಲಿದೆ ಸಿಂಹಪಾಲು
ವರದಿಯ ಪ್ರಕಾರ, ಈ ಬೃಹತ್ ಪ್ಯಾಕೇಜ್‌ನ ಬಹುಪಾಲು ಹಣವು ಪರ್ಫಾರ್ಮೆನ್ಸ್ ಸ್ಟಾಕ್ ಯುನಿಟ್‌ಗಳ (PSU) ರೂಪದಲ್ಲಿ ದೊರೆಯಲಿದೆ. ಇದರ ಮೌಲ್ಯ ಸುಮಾರು 126 ಮಿಲಿಯನ್ ಡಾಲರ್(1158 ಕೋಟಿ ರೂ.) ಆಗಿದ್ದು, ಇದನ್ನು ಎರಡು ಸಮಾನ ಕಂತುಗಳಲ್ಲಿ ವಿಂಗಡಿಸಲಾಗಿದೆ. ಈ ಷೇರುಗಳು ಆಲ್ಫಾಬೆಟ್ ಕಂಪನಿಯ ಲಾಭಾಂಶ ಮತ್ತು ಷೇರುದಾರರ ಆದಾಯದ ಮೇಲೆ ಆಧರಿತವಾಗಿವೆ. ಒಂದು ವೇಳೆ ಕಂಪನಿಯು ನಿಗದಿತ ಗುರಿಗಳನ್ನು ಮೀರಿ ಸಾಧನೆ ಮಾಡಿದರೆ ಈ ಮೊತ್ತವು ದುಪ್ಪಟ್ಟಾಗಿ 252 ಮಿಲಿಯನ್ ಡಾಲರ್(2316 ಕೋಟಿ ರೂ.)ಗಳಿಗೆ ತಲುಪುವ ಸಾಧ್ಯತೆಯಿದೆ. ಗುರಿ ತಲುಪುವಲ್ಲಿ ವಿಫಲವಾದರೆ ಯಾವುದೇ ಮೊತ್ತ ದೊರೆಯುವುದಿಲ್ಲ. ಇದಲ್ಲದೆ, ಪಿಚೈ ಅವರಿಗೆ ವಾರ್ಷಿಕ 2 ದಶಲಕ್ಷ ಡಾಲರ್(18.30 ಕೋಟಿ ರೂ.) ಮೂಲ ವೇತನದ ಜೊತೆಗೆ, ಮುಂದಿನ 3 ವರ್ಷಗಳವರೆಗೆ ಪ್ರತಿ ತಿಂಗಳು 84 ಮಿಲಿಯನ್ ಡಾಲರ್(772.20 ಕೋಟಿ ರೂ.) ಮೌಲ್ಯದ ನಿರ್ಬಂಧಿತ ಷೇರುಗಳು ಲಭ್ಯವಾಗಲಿವೆ.
ಹೊಸ ಯೋಜನೆಗಳಿಗೂ ಭಾರಿ ಪ್ರೋತ್ಸಾಹಧನ
ತಂತ್ರಜ್ಞಾನ ದೈತ್ಯ ಗೂಗಲ್ ತನ್ನ ಸ್ವಾಯತ್ತ ಯೋಜನೆಗಳ ಬೆಳವಣಿಗೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪಿಚೈ ಅವರಿಗೆ 350 ಮಿಲಿಯನ್ ಡಾಲರ್‌ಗಳಷ್ಟು ಹೊಸ ಸ್ಟಾಕ್ ಪ್ರೋತ್ಸಾಹಕಗಳನ್ನು ಘೋಷಿಸಿದೆ. ಸ್ವಯಂಚಾಲಿತ ಚಾಲನೆ ಮತ್ತು ವಿತರಣಾ ವಿಭಾಗದಲ್ಲಿನ ಬೃಹತ್ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಿರುವ ‘ವೇಮೋ’ (Waymo) ಮತ್ತು ‘ವಿಂಗ್’ (Wing) ಸಂಸ್ಥೆಗಳ ನೇತೃತ್ವ ವಹಿಸಿರುವ ಸುಂದರ್ ಪಿಚೈ ಅವರ ನಾಯಕತ್ವದ ಮೇಲೆ ಆಲ್ಫಾಬೆಟ್ ಆಡಳಿತ ಮಂಡಳಿ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದೆ. ಇದರ ಫಲವೆಂಬಂತೆ ಅವರು 130 ಮಿಲಿಯನ್ ಡಾಲರ್ ಮೌಲ್ಯದ ವೇಮೋ ಷೇರುಗಳು ಹಾಗೂ 45 ಮಿಲಿಯನ್ ಡಾಲರ್ ಮೌಲ್ಯದ ವಿಂಗ್ ಏವಿಯೇಷನ್ ಷೇರುಗಳನ್ನು ಪಡೆಯಲಿದ್ದಾರೆ.
ಪಿಚೈ ನಾಯಕತ್ವದಲ್ಲಿ ಗೂಗಲ್ ಅಭೂತಪೂರ್ವ ಪ್ರಗತಿ
ಭಾರತೀಯ ಮೂಲದ 53 ವರ್ಷದ ಸುಂದರ್ ಪಿಚೈ 2004ರಲ್ಲಿ ಗೂಗಲ್ ಸೇರ್ಪಡೆಗೊಂಡು, ಕ್ರೋಮ್ ಮತ್ತು ಆಂಡ್ರಾಯ್ಡ್ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆಗಸ್ಟ್ 2015ರಲ್ಲಿ ಗೂಗಲ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ನಂತರ ಕಂಪನಿಯ ಮಾರುಕಟ್ಟೆ ಮೌಲ್ಯವು 535 ಬಿಲಿಯನ್ ಡಾಲರ್‌ನಿಂದ 3.6 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ (ಜನವರಿಯಲ್ಲಿ ಇದು 4 ಟ್ರಿಲಿಯನ್ ಡಾಲರ್ ಮುಟ್ಟಿತ್ತು). ಇತ್ತೀಚೆಗಷ್ಟೇ ಅವರು ತಮ್ಮ ಬಳಿಯಿದ್ದ 9.8 ಮಿಲಿಯನ್ ಡಾಲರ್ ಮೌಲ್ಯದ 32,500 ‘ಕ್ಲಾಸ್ ಸಿ’ ಷೇರುಗಳನ್ನು ಮಾರಾಟ ಮಾಡಿದ್ದರು. ವರದಿಗಳ ಪ್ರಕಾರ, ಪ್ರಸ್ತುತ ಪಿಚೈ ದಂಪತಿ ಬಳಿ 498 ಮಿಲಿಯನ್ ಡಾಲರ್ ಮೌಲ್ಯದ 1.67 ಮಿಲಿಯನ್ ಗೂಗಲ್ ಷೇರುಗಳಿವೆ.
ಇತರ ಟೆಕ್ ದಿಗ್ಗಜರಿಗೆ ಹೋಲಿಸಿದರೆ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ 2025ರ ಆರ್ಥಿಕ ವರ್ಷದಲ್ಲಿ 96.5 ಮಿಲಿಯನ್ ಡಾಲರ್ ಗಳಿಸಿದ್ದರೆ, ಆ್ಯಪಲ್‌ನ ಟಿಮ್ ಕುಕ್ 74.3 ಮಿಲಿಯನ್ ಡಾಲರ್ ಸಂಭಾವನೆ ಪಡೆದಿದ್ದಾರೆ. ಈ ಬೃಹತ್ ವೇತನ ಹೆಚ್ಚಳದೊಂದಿಗೆ ಸುಂದರ್ ಪಿಚೈ ಟೆಕ್ ವಲಯದ ಅತ್ಯಂತ ದುಬಾರಿ ಸಿಇಒ ಎಂಬ ಖ್ಯಾತಿ ಗಳಿಸಿದ್ದಾರೆ.
ಇದನ್ನೂ ಓದಿ : ಡಿಸಿಎಂ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ.. ತಪ್ಪಿದ ದುರಂತ!



















