ಚಂದ್ರಬಾಬು ನಾಯ್ಡುಗೆ ಚುನಾವಣಾ ಫಲಿತಾಂಶ ಹೊರ ಬಂದಿದ್ದೇ ಬಂದಿದ್ದು, ಲಕ್ ಮೇಲೆ ಲಕ್ ಶುರುವಾಗಿದೆ. ಒಂದೆಡೆ ಆಂಧ್ರದಲ್ಲಿ ಭರ್ಜರಿಯಾಗಿ ಗೆದ್ದು ಸಿಎಂ ಆಗುತ್ತಿದ್ದರೆ, ಕೇಂದ್ರದಲ್ಲಿಯೂ ಸರ್ಕಾರ ರಚನೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇದರ ಮಧ್ಯೆ ಕುಟುಂಬದ ಆಸ್ತಿಯ ಮೌಲ್ಯ ಬರೋಬ್ಬರಿ 870 ಕೋಟಿ ರೂ. ಏರಿಕೆಯಾಗಿದ್ದು, ಅದು ಕೂಡ ಕೇವಲ ಐದೇ ದಿನಗಳಲ್ಲಿ ಎಂಬುವುದು ವಿಶೇಷವಾಗಿದೆ.
ಲೋಕಸಭೆ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಒಂದು ಕಂಪನಿಯ ಷೇರು ಭಾರೀ ಏರಿಕೆ ಕಾಣುತ್ತಿದೆ. ಅದೇ ಎಫ್‌ಎಂಸಿಜಿ ಕಂಪನಿ ‘ಹೆರಿಟೇಜ್ ಫುಡ್ಸ್ ಲಿಮಿಟೆಡ್’. ಈ ಕಂಪನಿಯಲ್ಲಿ ಆಂಧ್ರ ಪ್ರದೇಶದ ನಿಯೋಜಿತ ಸಿಎಂ ಚಂದ್ರಬಾಬು ನಾಯ್ಡು ಕುಟುಂಬ ಭಾರಿ ಹೂಡಿಕೆ ಮಾಡಿದೆ.
ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ದಿನ ಷೇರು ಮಾರುಕಟ್ಟೆ ತೀವ್ರ ಕುಸಿತ ದಾಖಲಿಸಿತ್ತು. ಇದರ ನಡುವೆಯೂ ಹೆರಿಟೇಜ್ ಫುಡ್ಸ್ ಲಿಮಿಟೆಡ್ ಷೇರುಗಳು ಗಟ್ಟಿಯಾಗಿ ನಿಂತಿದ್ದವು. ಅಲ್ಲದೇ, ಏರಿಕೆಯಾಗುತ್ತಲೇ ಇವೆ.
ಕಳೆದ ಐದು ದಿನಗಳಲ್ಲಿ ಈ ಕಂಪನಿಯ ಷೇರುಗಳು ಶೇ. 55ರಷ್ಟು ಭಾರೀ ಏರಿಕೆ ಕಂಡಿವೆ. 2024ರ ಮೇ 31ರಂದು ಕಂಪನಿಯ ಷೇರಿನ ಬೆಲೆ 402.90 ರೂ. ಆಗಿತ್ತು. ಸದ್ಯ ಶುಕ್ರವಾರದ ದಿನದಂತ್ಯಕ್ಕೆ 661.25 ರೂ.ನಲ್ಲಿ ವಹಿವಾಟು ಮುಗಿಸಿದೆ. ಶುಕ್ರವಾರದ ಏರಿಕೆಯೊಂದಿಗೆ ಕಂಪನಿ ಷೇರುಗಳು ಕಳೆದ 5 ದಿನದಲ್ಲಿ 258.35 ರೂ. ಏರಿಕೆಯಾಗಿದ್ದು ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.
ಹೆರಿಟೇಜ್ ಫುಡ್ಸ್ ಮೌಲ್ಯವರ್ಧಿತ ಮತ್ತು ಬ್ರಾಂಡೆಡ್ ಡೈರಿ ಉತ್ಪನ್ನಗಳಿಗೆ ಹೆಸರುವಾಸಿಯಾಗಿದ್ದು, ಈ ವಲಯದಲ್ಲಿ ಭಾರತದ ಪ್ರಮುಖ ಕಂಪನಿಯಾಗಿದೆ. ಚಂದ್ರಬಾಬು ನಾಯ್ಡು ಪರ ಚುನಾವಣಾ ಫಲಿತಾಂಶ ಬಂದ ದಿನದಿಂದ ಹೆರಿಟೇಜ್ ಫುಡ್ಸ್ ಮಾರುಕಟ್ಟೆ ಮೌಲ್ಯ ಸುಮಾರು 2,400 ಕೋಟಿ ರೂ.ಗಳಷ್ಟು ಏರಿಕೆ ಕಂಡಿದೆ. ಕಂಪನಿ ಮೌಲ್ಯ ಒಂದು ವಾರದ ಹಿಂದೆ ಇದ್ದ 3,700 ಕೋಟಿ ರೂ.ನಿಂದ ಜೂನ್ 7ರ ವೇಳೆಗೆ 6,136 ಕೋಟಿ ರೂ.ಗೆ ಏರಿಕೆಯಾಗಿದೆ.
ಈ ಕಂಪನಿಯಲ್ಲಿ ಚಂದ್ರಬಾಬು ನಾಯ್ಡು ಅವರ ಪತ್ನಿ ನಾರಾ ಭುವನೇಶ್ವರಿ ಶೇ. 24.37ರಷ್ಟು ಷೇರು ಹೊಂದಿದ್ದಾರೆ. ಅವರ ಬಳಿ 2,26,11,525 ಷೇರುಗಳಿವೆ. ಅಲ್ಲದೇ, ನಾಯ್ಡು ಪುತ್ರ, ಶಾಸಕ ನಾರಾ ಲೋಕೇಶ್ ಹಾಗೂ ಅವರ ಪತ್ನಿ ಕ್ರಮವಾಗಿ ಶೇ. 10.82 ಹಾಗೂ ಶೇ. 0.46ರಷ್ಟು ಷೇರು ಹೊಂದಿದ್ದಾರೆ. ಈಗ ಷೇರು ಬೆಲೆ ಏರಿಕೆಯಿಂದ ನಾರಾ ಭುವನೇಶ್ವರಿ ಅವರ ಸಂಪತ್ತಿನ ನಿವ್ವಳ ಮೌಲ್ಯದಲ್ಲಿ ಕೇವಲ ಐದೇ ದಿನದಲ್ಲಿ 584 ಕೋಟಿ ರೂ. ಏರಿದೆ. ನಾರಾ ಲೋಕೇಶ್ ಸಂಪತ್ತು 237.8 ಕೋಟಿ ರೂ.ನಷ್ಟು ಹೆಚ್ಚಾಗಿದೆ.