2025 ರ ಐಪಿಎಲ್ ಗೆ ದಿನಗಣನೆ ಆರಂಭವಾಗಿದೆ. ಈ ಮಧ್ಯೆ ಆಟಗಾರರಿಗೆ ಬಂಪರ್ ಗಿಪ್ಟ್ ನ್ನು ಬಿಸಿಸಿಐ ನೀಡಿದೆ.
ಪ್ರಸಕ್ತ ಸಾಲಿನ ಟೂರ್ನಿ ಆರಂಭಕ್ಕೂ ಮುನ್ನ ಮೆಗಾ ಹರಾಜು ನಡೆಯಬೇಕಿದೆ. ಆದರೆ, ಬಿಸಿಸಿಐ ಇನ್ನೂ ಮಾಹಿತಿ ನೀಡಿಲ್ಲ. ಮುಂಬರುವ ಐಪಿಎಲ್ ನಿಂದ ಪ್ರತಿ ಪಂದ್ಯವನ್ನು ಆಡುವ ಆಟಗಾರರಿಗೆ ಪಂದ್ಯ ಶುಲ್ಕವಾಗಿ 7.5 ಲಕ್ಷ ರೂ.ಗಳನ್ನು ನೀಡುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.
ಐಪಿಎಲ್ ನಲ್ಲಿ ಇಲ್ಲಿಯವರೆಗೆ 17 ಆವೃತ್ತಿಗಳಲ್ಲಿ ಆಟಗಾರರಿಗೆ ಯಾವುದೇ ಪಂದ್ಯ ಶುಲ್ಕವನ್ನು ನೀಡುತ್ತಿರಲಿಲ್ಲ. ಹರಾಜಿನಲ್ಲಿ ಯಾವ ಆಟಗಾರ, ಯಾವ ತಂಡಕ್ಕೆ, ಎಷ್ಟು ಮೊತ್ತಕ್ಕೆ ಹರಾಜುಗುತ್ತಿದ್ದನೋ, ಅಷ್ಟು ಮೊತ್ತವನ್ನು ಫ್ರಾಂಚೈಸಿ ಕಡೆಯಿಂದ ವೇತನವಾಗಿ ಪಡೆಯುತ್ತಿದ್ದ. ಅದನ್ನು ಬಿಟ್ಟರೆ ಪಂದ್ಯದಲ್ಲಿನ ಉತ್ತಮ ಪ್ರದರ್ಶನಕ್ಕಾಗಿ ವಿವಿಧ ಪ್ರಶಸ್ತಿಗಳ ರೂಪದಲ್ಲಿ ಆಟಗಾರರಿಗೆ ಬಹುಮಾನದ ರೂಪದಲ್ಲಿ ಹಣ ಸಿಗುತ್ತಿತ್ತು. ಉಳಿದಂತೆ ಬಿಸಿಸಿಐ ಮಾತ್ರ ಯಾವುದೇ ರೀತಿಯ ವೇತನವನ್ನು ಆಟಗಾರರಿಗೆ ನೀಡುತ್ತಿರಲಿಲ್ಲ. ಆದರೆ, ಈಗ ಬಿಸಿಸಿಐ ಕೂಡ ವೇತನ ನೀಡಲು ಮುಂದಾಗಿದೆ.
ಐಪಿಎಲ್ ನಲ್ಲಿ ಆಡುವ ಆಟಗಾರರಿಗೆ ಪ್ರತಿ ಪಂದ್ಯಕ್ಕೆ ಪಂದ್ಯ ಶುಲ್ಕವಾಗಿ 7.5 ಲಕ್ಷ ರೂಗಳನ್ನು ನೀಡಲಾಗುತ್ತದೆ. ಐಪಿಎಲ್ ಆಡಳಿತ ಮಂಡಳಿ ಸಭೆಯ ನಂತರ ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಮುಂದಿನ ಸೀಸನ್‌ನಿಂದ ಆಟಗಾರರು ಐಪಿಎಲ್ ನಲ್ಲಿ ಪಂದ್ಯ ಶುಲ್ಕವನ್ನು ಪಡೆಯುತ್ತಾರೆ ಎಂದು ಘೋಷಿಸಿದ್ದಾರೆ. ಆಟಗಾರರು ಒಂದು ಪಂದ್ಯಕ್ಕೆ 7.5 ಲಕ್ಷ ರೂ. ಪಡೆಯುತ್ತಾರೆ.
ಈ ರೀತಿಯಾಗಿ ಒಬ್ಬ ಆಟಗಾರ ಲೀಗ್ ಹಂತದ ಎಲ್ಲ 14 ಪಂದ್ಯಗಳನ್ನು ಆಡಿದರೆ ಅವನಿಗೆ ಒಟ್ಟಾರೆಯಾಗಿ 1.05 ಕೋಟಿ ರೂ. ಪಂದ್ಯ ಶುಲ್ಕ ಸಿಗಲಿದೆ. ಪ್ಲೇ ಆಫ್ ನಲ್ಲಿ ಫೈನಲ್ ಸೇರಿದಂತೆ ಇನ್ನೂ 3 ಪಂದ್ಯಗಳನ್ನು ಆಡಿದರೆ, ಅವನಿಗೆ ಒಟ್ಟು 1.23 ಕೋಟಿ ರೂ. ವೇತನ ಸಿಗಲಿದೆ. ಅಂದರೆ ಒಬ್ಬ ಆಟಗಾರನ ಹರಾಜು ಶುಲ್ಕ ಕೋಟಿಗಟ್ಟಲೆ ಇರಲಿ ಅಥವಾ ಮೂಲ ಬೆಲೆ ಕೇವಲ 20 ಲಕ್ಷ ರೂ.ಗಳಿರಲಿ, ಪಂದ್ಯಾವಳಿಯಲ್ಲಿ ಆಡಿದ ಪಂದ್ಯಗಳ ಸಂಖ್ಯೆಗೆ ಅನುಗುಣವಾಗಿ ಆತ ವೇತನ ಪಡೆಯಲಿದ್ದಾನೆ. ಎಲ್ಲಾ ಫ್ರಾಂಚೈಸಿಗಳು ಪಂದ್ಯ ಶುಲ್ಕಕ್ಕಾಗಿ 12.60 ಕೋಟಿ ರೂ.ಗಳ ಪ್ರತ್ಯೇಕ ನಿಧಿಯನ್ನು ಇಡುತ್ತವೆ ಎಂದು ಶಾ ಪೋಸ್ಟ್ ನಲ್ಲಿ ಹೇಳಿದ್ದಾರೆ. ಈ ಸುದ್ದಿ ಕೇಳಿ ಆಟಗಾರರು ಸಂತಸ ವ್ಯಕ್ತಪಡಿಸಿದ್ದಾರೆ.