ವಿಜಯಪುರ: ಕಾರ ಹುಣ್ಣಿಮೆ (kara hunnime) ಹಿನ್ನೆಲೆಯಲ್ಲಿ ಎತ್ತು- ಹೋರಿಗಳನ್ನು ಬೆದರಿಸುವ ಪದ್ದತಿಯು ಉತ್ತರ ಕನ್ನಡದಲ್ಲಿ ನಡೆದುಕೊಂಡು ಬರುತ್ತಿದೆ. ಹೀಗೆ ಇಂತಹ ಪ್ರಸಂಗವೊಂದನ್ನು ವೀಕ್ಷಿಸಲು ಬಂದಿದ್ದ ವ್ಯಕ್ತಿಯೊಬ್ಬರಿಗೆ ಹೋರಿಯೊಂದು (bull) ತಿವಿದು ಎತ್ತಿ ಬಿಸಾಡಿ, ಕರುಳು ಬಗಿದಿರುವ ಘಟನೆಯೊಂದು ನಡೆದಿದೆ.

ಕೂಡಲೇ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಆ ವ್ಯಕ್ತಿಗೆ ಮರು ಜೀವ ನೀಡಿದ್ದಾರೆ. ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಗಿ ಗ್ರಾಮದಲ್ಲಿ ಕಾರಹುಣ್ಣಿಮೆಯ ಹಿನ್ನೆಲೆಯಲ್ಲಿ ಕರಿ ಹರಿಯೋ ಸಂಪ್ರದಾಯ ನಡೆಸುತ್ತಾರೆ. ಈ ಸಂದರ್ಭದಲ್ಲಿ ಹೋರಿಗಳನ್ನು ಬೆದರಿಸಿ ಓಡಿಸುವುದನ್ನು ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಜನ ಬರುತ್ತಾರೆ. ಹೀಗೆ ನಿಡಗುಂದಿ ತಾಲೂಕಿನ ಮುದ್ದಾಪೂರ ಗ್ರಾಮದ ಪರಸಪ್ಪ ಬಿರಾದಾರ್ ಎಂಬ ಯುವಕ ಆಗಮಿಸಿದ್ದ. ರಸ್ತೆಯ ಪಕ್ಕದಲ್ಲಿ ಜನರ ಮಧ್ಯೆ ಕುಳಿತಿದ್ದ ಪರಸಪ್ಪನ ಮೇಲೆ ಹೋರಿ ದಾಳಿ ನಡೆಸಿ, ಕೊಂಬಿನಲ್ಲಿ ಎತ್ತಿ ಬಿಸಾಕಿದೆ. ಪರಿಣಾಮ ಗಾಳಿಯಲ್ಲಿ ಹಾರಿ ಬಿದ್ದ ಪರಸಪ್ಪನ ಹೊಟ್ಟೆ ಹರಿದು ಕರುಳೆಲ್ಲಾ ಹೊರಗೆ ಬಿದ್ದಿತ್ತು. ಕೂಡಲೇ ಆತನನ್ನು ವಿಜಯಪುರ ನಗರದ ಬಿಎಲ್ಡಿಇ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪರಸಪ್ಪ ಬಿರಾದಾರ್ ನನ್ನು ತೀವ್ರ ನಿಗಾ ಘಟಕದಲ್ಲಿರಿಸಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಆರೋಗ್ಯ ಸ್ಥಿರವಾಗಿದೆ ಎನ್ನಲಾಗುತ್ತಿದೆ.