ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, ಕಟ್ಟಡ ಕಲ್ಲು, ಮೈನಿಂಗ್ ಸ್ಟೋನ್ ರಾಯಲ್ಟಿ ಹೆಚ್ಚಿಸಲಾಗಿದೆ. ಹೀಗಾಗಿ ಕಟ್ಟಡ ಕಟ್ಟುವವರ ಕನಸು ಮತ್ತಷ್ಟು ದುಬಾರಿಯಾದಂತಾಗಿದೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಹೆಚ್.ಕೆ.ಪಾಟೀಲ್, ಸರ್ಕಾರದ ಆದಾಯ ಹೆಚ್ಚಿಸಲು ಹಲವು ವಿಚಾರಗಳನ್ನು ಚರ್ಚಿಸಲಾಯಿತು. ಈಗಾಗಲೇ ಗ್ಯಾರಂಟಿಗಳಿಗೆ ಸಾಕಷ್ಟು ಹಣ ನಮ್ಮಲ್ಲಿದೆ. ರಾಜ್ಯದ ಅಭಿವೃದ್ಧಿಗಾಗಿ ರಾಯಲ್ಟಿ ಹಾಗೂ ತೆರಿಗೆ ಹೆಚ್ಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಉಪ ಖನಿಜ ರಿಯಾಯಿತಿ ನಿಯಮ ತಿದ್ದುಪಡಿಗೆ ಸಂಪುಟವು ಒಪ್ಪಿಗೆ ಸೂಚಿಸಿದೆ. ಅಕ್ರಮ ಕಲ್ಲು ಗಣಿಗಾರಿಕೆ ವಿಚಾರದ ಕುರಿತು ಚರ್ಚೆ ನಡೆಸಲಾಗಿದೆ. ರಾಯಲ್ಟಿ ಪರಿಷ್ಕರಣೆ ಮಾಡಲು ಸಂಪುಟ ಸಭೆ ಸಮ್ಮತಿಸಿದೆ ಎಂದಿದ್ದಾರೆ.
ಕಟ್ಟಡ ಕಲ್ಲು, ಮೈನಿಂಗ್ ಕಲ್ಲು ಪ್ರತಿ ಟನ್ಗೆ 80 ರೂ. ರಾಯಲ್ಟಿ ನಿಗದಿಯಿಂದ 311.55 ಕೋಟಿ ರೂ. ಹೆಚ್ಚುವರಿ ಸಂಗ್ರಹವಾಗಿದೆ. ಮೊದಲು ಮೆಟ್ರಿಕ್ ಟನ್ಗೆ 20 ರೂ. ರಾಯಲ್ಟಿ ನಿಗದಿಯಾಗಿತ್ತು. ಈಗ ಪ್ರತಿ ಮೆಟ್ರಿಕ್ ಕಲ್ಲಿಗೆ 10 ರೂ. ರಾಯಲ್ಟಿ ಹೆಚ್ಚಳವಾಗಿದೆ ಎಂದಿದ್ದಾರೆ.
ಗಣಿಗಾರಿಕೆ ನಡೆಸುವವರು ಕಳೆದ ಐದು ವರ್ಷಗಳಿಂದ ದಂಡ ಕಟ್ಟಿಲ್ಲ. ಹೀಗಾಗಿ ದಂಡ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. 1221 ಕೋಟಿ ರೂ. ರಾಯಲ್ಟಿ ಅಂತ ಪರಿಗಣಿಸಿದ್ದೇವೆ. 6105 ಕೋಟಿ ರೂ. ದಂಡ ಬಾಕಿ ಉಳಿದಿದೆ. ಒಟಿಎಸ್ ನಿಂದ ಇದರಲ್ಲಿ ಸ್ವಲ್ಪ ವ್ಯತ್ಯಾಸ ಆಗಬಹುದು. ಸರ್ಕಾರಕ್ಕೆ ಆದಾಯಬೇಕು. ಹೀಗಾಗಿ ವಸೂಲಿ ಮಾಡುತ್ತೇವೆ ಎಂದಿದ್ದಾರೆ.