ನವದೆಹಲಿ: ಸಂಸತ್ ಬಜೆಟ್ ಅಧಿವೇಶನ ಶುಕ್ರವಾರದಿಂದ ಆರಂಭವಾಗಿದ್ದು, ಫೆ.1ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಅಧಿವೇಶನದ ಮೊದಲ ದಿನವಾದ ಶುಕ್ರವಾರ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮಾತನಾಡಿದ್ದಾರೆ.
ಅಧಿವೇಶನ ಆರಂಭವಾಗುವುದಕ್ಕೆ ಮೊದಲು ಎಂದಿನಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, “ಸಂಸತ್ ಅಧಿವೇಶನಕ್ಕೆ ಮುನ್ನ ಯಾವುದೇ ವಿದೇಶಿ ಶಕ್ತಿಗಳ ಹಸ್ತಕ್ಷೇಪ ಆಗದಿರುವುದು ಕಳೆದ 10 ವರ್ಷಗಳಲ್ಲಿ ಇದೇ ಮೊದಲು” ಎಂದು ಹೇಳುವ ಮೂಲಕ ಪ್ರತಿಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.
“2014ರಿಂದ ನೋಡುತ್ತಿದ್ದೇನೆ. ಇದೇ ಮೊದಲ ಬಾರಿಗೆ ಸಂಸತ್ ಅಧಿವೇಶನವು ಯಾವುದೇ ವಿದೇಶಿ ಚಿಂಗಾರಿ(ವಿದೇಶಿ ಹಸ್ತಕ್ಷೇಪ) ಇಲ್ಲದೇ ಆರಂಭವಾಗುತ್ತಿದೆ. ಈ ಬಾರಿ ಯಾವುದೇ ವಿದೇಶಿ ಶಕ್ತಿಗಳು ಬೆಂಕಿಯ ಕಿಡಿ ಹೊತ್ತಿಸಿಲ್ಲ. ಕಳೆದ 10 ವರ್ಷಗಳಿಂದಲೂ ನೋಡುತ್ತಿದ್ದೇನೆ, ಪ್ರತಿ ಬಜೆಟ್ ಅಧಿವೇಶನಕ್ಕೆ ಮುನ್ನ, ಏನಾದರೊಂದು ಕಿಡಿಗೇಡಿತನವನ್ನು ಮಾಡುತ್ತಾ ಬರಲಾಗಿದೆ. ಈ ಕಿಡಿಯನ್ನು ದೊಡ್ಡ ಜ್ವಾಲೆಯಾಗಿ ಪರಿವರ್ತಿಸಲು ನಮ್ಮ ದೇಶದ ಅನೇಕರು ಪ್ರಯತ್ನಿಸುತ್ತಲೇ ಬರುತ್ತಿದ್ದಾರೆ. ಆದರೆ, ಅದೃಷ್ಟವಶಾತ್ ಈ ಬಾರಿ ಯಾವುದೇ ವಿದೇಶಿ ಶಕ್ತಿಯ ಹಸ್ತಕ್ಷೇಪ ನಡೆದಿಲ್ಲ” ಎಂದು ಮೋದಿ ಹೇಳಿದ್ದಾರೆ.
ಈ ಹಿಂದೆ ಅಮೆರಿಕದ ಶಾರ್ಟ್ ಸೆಲ್ಲರ್ ಹಿಂಡನ್ ಬರ್ಗ್ ರಿಸರ್ಚ್ ಸಂಸ್ಥೆಯು ಅದಾನಿ ಸಮೂಹದ ವಿರುದ್ಧ ಮಾಡಿದ ಆರೋಪಗಳ ಹಿನ್ನೆಲೆಯಲ್ಲಿ ಸಂಸತ್ ಕಲಾಪಗಳು ವ್ಯರ್ಥವಾಗಿದ್ದವು. ಹಿಂಡನ್ ಬರ್ಗ್ ಮಾಡಿದ್ದ ಆರೋಪಗಳನ್ನೆತ್ತಿಕೊಂಡು ಪ್ರತಿಪಕ್ಷಗಳು ಕಲಾಪದಲ್ಲಿ ಗದ್ದಲ ಎಬ್ಬಿಸಿದ್ದವು. ಈ ಹಿನ್ನೆಲೆಯಲ್ಲಿ ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ಈ ರೀತಿ ವ್ಯಂಗ್ಯಭರಿತವಾಗಿಯೇ ಚಾಟಿ ಬೀಸಿದ್ದಾರೆ.
ಇದೇ ವೇಳೆ, ಸಂಸತ್‌ನ ಉಭಯ ಸದನಗಳನ್ನು ಉದ್ದೇಶಿಸಿ ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾತನಾಡಿದ್ದು, ಇಂದಿನ ಸರ್ಕಾರವು ಹಿಂದಿನ ಎಲ್ಲ ಸರ್ಕಾರಗಳಿಗಿಂತಲೂ ಹಲವು ಪಟ್ಟು ವೇಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ. ರಾಷ್ಟ್ರಪತಿ ಭಾಷಣದ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿದ್ದಾರೆ. ಶನಿವಾರ ಬಜೆಟ್ ಮಂಡನೆಯಾಗಲಿದೆ.