ಬೆಂಗಳೂರು | ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ 2026-27ನೇ ಸಾಲಿನ ಬಜೆಟ್ ಸಿದ್ಧತಾ ಕಾರ್ಯಗಳು ಚುರುಕುಗೊಂಡಿವೆ. ಜಿಬಿಎ ಆರ್ಥಿಕ ವಿಭಾಗದ ವಿಶೇಷ ಆಯುಕ್ತ ಹರೀಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಹಿರಿಯ ಅಧಿಕಾರಿಗಳು ಆಯವ್ಯಯ ರೂಪುರೇಷೆ ಅಂತಿಮಗೊಳಿಸುತ್ತಿದ್ದಾರೆ.
ಈ ಮಧ್ಯೆ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಲಿಮಿಟೆಡ್ (BSWML) ಸಂಸ್ಥೆ ಮುಂದಿನ ಆರ್ಥಿಕ ವರ್ಷಕ್ಕೆ 2,794 ಕೋಟಿ ಅನುದಾನವನ್ನು ಮೀಸಲಿಡುವಂತೆ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಪತ್ರದ ಮೂಲಕ ಮನವಿ ಮಾಡಿದೆ.
ಘನತ್ಯಾಜ್ಯ ಘಟಕದ ಸಿಇಒ ಕರೀಗೌಡ ಅವರು ಐದೂ ನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು, ಈಗಾಗಲೇ ಚಾಲ್ತಿಯಲ್ಲಿರುವ ಹಾಗೂ ಟೆಂಡರ್ ಹಂತದಲ್ಲಿರುವ ಅಭಿವೃದ್ಧಿ ಮತ್ತು ನಿರ್ವಹಣೆ ಕಾಮಗಾರಿಗಳಿಗೆ ಹಣ ಮೀಸಲಿಡಲು, ಮುಂಬರುವ ವರ್ಷದಲ್ಲಿ ಘನತ್ಯಾಜ್ಯ ನಿರ್ವಹಣೆಯಲ್ಲಿ ವ್ಯತ್ಯಯವಾಗದಂತೆ ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಿದ್ದಾರೆ. 5 ನಗರಪಾಲಿಕೆಯ ಅಸ್ತಿ ತೆರಿಗೆ ವೇಳೆ ವಸೂಲಿ ಮಾಡುವ ಬಳಕೆದಾರರ ಶುಲ್ಕ (User Fees), ಹಾಗೂ ಘನತ್ಯಾಜ್ಯ ಉಪಕರಣಗಳ ಸೆಸ್ (CESS) ಆಧಾರದಲ್ಲಿ ಅನುದಾನ ಹಂಚಿಕೆ ಮಾಡಲು ಮನವಿ ಮಾಡಿದ್ದಾರೆ.
ಹಿಂದಿನ ವರ್ಷಗಳ ಹಂಚಿಕೆ –
2024ರ ಬಜೆಟ್: 1085 ಕೋಟಿ
2025ರ ಬಜೆಟ್: 1500 ಕೋಟಿ
2026-27ರ ಬೇಡಿಕೆ: 2794 ಕೋಟಿ
ಈ ಬಾರಿ ಬೇಡಿಕೆಯ ಮೊತ್ತ ದ್ವಿಗುಣಕ್ಕೂ ಹೆಚ್ಚು ಏರಿಕೆಯಾಗಿದೆ.
ನಗರ ಪಾಲಿಕೆವಾರು ಬೇಡಿಕೆ (ಕೋಟಿಗಳಲ್ಲಿ)..
ಕೇಂದ್ರ ನಗರ ಪಾಲಿಕೆ – 480.37.ಕೋಟಿ.
ಪೂರ್ವ ನಗರ ಪಾಲಿಕೆ – 496.07.ಕೋಟಿ.
ಉತ್ತರ ನಗರ ಪಾಲಿಕೆ – 558.80.ಕೋಟಿ.
ದಕ್ಷಿಣ ನಗರ ಪಾಲಿಕೆ – 546.18.ಕೋಟಿ.
ಪಶ್ಚಿಮ ನಗರ ಪಾಲಿಕೆ – 715.91.ಕೋಟಿ.
ಒಟ್ಟು : 2794 ಕೋಟಿ.
ಇನ್ನೂ ಪತ್ರದಲ್ಲಿ ಆಟೋ, ಟಿಪ್ಪರ್‌ಗಳು, ಕಾಂಪ್ಯಾಕ್ಟರ್‌ಗಳು, ಭೂಭರ್ತಿ (ಲ್ಯಾಂಡ್‌ಫಿಲ್), ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಇತರೆ ಕಾರ್ಯಾಚರಣಾ ವೆಚ್ಚಗಳ ವಿವರಗಳನ್ನು ನಮೂದಿಸಲಾಗಿದೆ. ಒಂದೆಡೆ ಘನತ್ಯಾಜ್ಯ ನಿರ್ವಹಣೆಗೆ ಭಾರೀ ಅನುದಾನ ಮೀಸಲಿಡುವ ಒತ್ತಡವಿದ್ದರೆ, ಮತ್ತೊಂದೆಡೆ ಐದು ನಗರ ಪಾಲಿಕೆಗಳು ವಾರ್ಡ್ ಮಟ್ಟದ ಅಭಿವೃದ್ಧಿ ಕಾಮಗಾರಿಗಳಿಗೆ ಹಣದ ಕೊರತೆಯನ್ನು ಎದುರಿಸುತ್ತಿವೆ. ಸರ್ಕಾರದ ಅನುದಾನಕ್ಕೆ ಅವಲಂಬಿತವಾಗಿರುವ ಈ ಪಾಲಿಕೆಗಳು ಸಮತೋಲನ ಸಾಧಿಸುವ ಸವಾಲಿನಲ್ಲಿವೆ.
ಒಟ್ಟಾರೆ, 2026-27ರ ಬಜೆಟ್‌ನಲ್ಲಿ ಘನತ್ಯಾಜ್ಯ ನಿರ್ವಹಣೆ ಪ್ರಮುಖ ಪ್ರಾಮುಖ್ಯತೆ ಪಡೆದಿದ್ದರೂ, ಸ್ಥಳೀಯ ಅಭಿವೃದ್ಧಿ ಕಾರ್ಯಗಳಿಗೆ ಹಣ ಒದಗಿಸುವುದು ನಗರ ಪಾಲಿಕೆಗಳಿಗೆ ದೊಡ್ಡ ಪ್ರಶ್ನೆಯಾಗಿದೆ.
ಇದನ್ನೂ ಓದಿ : ಕಾವೇರಿ ನದಿಯಲ್ಲಿ ಗೃಹಿಣಿ ಶವ ಪತ್ತೆ



















