ಬೆಂಗಳೂರು: ದೇಶದ ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿಯಾದ ಭಾರತ ಸಂಚಾರ ನಿಗಮ ಲಿಮಿಟೆಡ್ (BSNL New Recharge Plan) ಈಗ ಹೊಸ ರಿಚಾರ್ಜ್ ಪ್ಲಾನ್ ಘೋಷಣೆ ಮಾಡಿದೆ. ಉಚಿತ ಕರೆಗಳು, ಪ್ರತಿ ದಿನ ಇಂಟರ್ನೆಟ್, ಉಚಿತ ಎಸ್ಎಂಎಸ್ ಸೇರಿ ಹಲವು ಸೌಲಭ್ಯಗಳಿರುವ ಪ್ಲಾನ್ ಅನ್ನು ಬಿಎಸ್ಸೆನ್ನೆಲ್ ಘೋಷಣೆ ಮಾಡಿದೆ.
ಹೌದು, ಬಿಎಸ್ಸೆನ್ನೆಲ್ ಗ್ರಾಹಕರು ಕೇವಲ 1,999 ರೂಪಾಯಿ ರಿಚಾರ್ಜ್ ಮಾಡಿದರೂ ಸಾಕು, 330 ದಿನಗಳವರೆಗೆ ಉಚಿತವಾಗಿ ಅನ್ ಲಿಮಿಟೆಡ್ ಕರೆಗಳನ್ನು ಮಾಡಬಹುದಾಗಿದೆ. ಫ್ರೀ ನ್ಯಾಷನಲ್ ರೋಮಿಂಗ್ ಸೌಲಭ್ಯವೂ ಸಿಗಲಿದೆ. ಇನ್ನು, ಪ್ರತಿ ದಿನ 1.5 ಜಿಬಿ ಇಂಟರ್ನೆಟ್ ಸಿಗಲಿದೆ. ಬಿಐಟಿವಿಯ ಬೇಸಿಕ್ ಸಬ್ ಸ್ಕ್ರಿಪ್ಶನ್ ಜತೆಗೆ, ನಿತ್ಯ 100 ಎಸ್ಎಂಎಸ್ ಗಳನ್ನು ಉಚಿತವಾಗಿ ಮಾಡಬಹುದಾಗಿದೆ.
ಹಾಗೆಯೇ, ಒಂದು ವರ್ಷಕ್ಕಾಗಿ ರಿಚಾರ್ಜ್ ಮಾಡಿಸಿದರೂ ಕೆಲ ಆಫರ್ ನೀಡಲಾಗಿದೆ. ಬಿಎಸ್ಸೆನ್ನೆಲ್ ಅಧಿಕೃತ ವೆಬ್ ಸೈಟ್ ಅಥವಾ ಸೆಲ್ಫ್ ಕೇರ್ ಆ್ಯಪ್ ಮೂಲಕ ರಿಚಾರ್ಜ್ ಮಾಡಿದರೆ, ಶೇ.2ರಷ್ಟು ರಿಯಾಯಿತಿ ದೊರೆಯಲಿದೆ. ಈ ಆಫರ್ ಅಕ್ಟೋಬರ್ 15ರವರೆಗೆ ಮಾತ್ರ ಚಾಲ್ತಿಯಲ್ಲಿರಲಿದೆ ಎಂದು ಕಂಪನಿ ತಿಳಿಸಿದೆ.
ಇತ್ತೀಚೆಗೆ ಬಿಎಸ್ಸೆನ್ನೆಲ್ ಆಧುನೀಕರಣಗೊಳ್ಳುತ್ತಿದೆ. ದೇಶಾದ್ಯಂತ 4ಜಿ ವ್ಯವಸ್ಥೆಗೆ ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ಸುಮಾರು 98 ಸಾವಿರ 4ಜಿ ಟವರ್ ಗಳನ್ನು ಕೆಲ ದಿನಗಳ ಹಿಂದಷ್ಟೇ ಲೋಕಾರ್ಪಣೆ ಮಾಡಲಾಗಿತ್ತು. ಇನ್ನೂ 1 ಲಕ್ಷ ಟವರ್ ಗಳನ್ನು ಸ್ಥಾಪಿಸುವ ಗುರಿಯನ್ನು ಬಿಎಸ್ಸೆನ್ನೆಲ್ ಹೊಂದಿದೆ.



















