ಬೆಂಗಳೂರು: ದೇಶದ ಪ್ರಮುಖ ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿಯಾದ ಭಾರತೀಯ ಸಂಚಾರ ನಿಗಮ ಲಿಮಿಟೆಡ್ (BSNL) ಇತ್ತೀಚೆಗೆ ಗ್ರಾಹಕರಿಗೆ ಹೊಸ ಹೊಸ ಆಫರ್ ನೀಡುತ್ತಿದೆ. ಇದರ ಭಾಗವಾಗಿಯೇ ಈಗ, ಪ್ರತಿ ದಿನ 2 ಜಿಬಿ ಡೇಟಾ, ಅನ್ ಲಿಮಿಟೆಡ್ ಉಚಿತ ಕರೆ ಸೇರಿ ಹಲವು ಸೌಲಭ್ಯಗಳಿರುವ ರಿಚಾರ್ಜ್ ಪ್ಲಾನ್ ಪರಿಚಯಿಸಿದೆ.
ಹೌದು, ಕೇವಲ 485 ರೂಪಾಯಿ ರಿಚಾರ್ಜ್ ಮಾಡಿದರೆ, ಪ್ರತಿ ದಿನ 2 ಜಿಬಿ ಡೇಟಾ, ಅನ್ ಲಿಮಿಟೆಡ್ ಉಚಿತ ಕರೆ ಸೌಲಭ್ಯ ಸಿಗಲಿದೆ. ಇದರ ಜತೆಗೆ, ನಿತ್ಯ 100 ಎಸ್ ಎಂ ಎಸ್ ಗಳನ್ನೂ ಉಚಿತವಾಗಿ ಮಾಡಬಹುದಾಗಿದೆ. ಹಾಗೆಯೇ, ಉಚಿತ ರಾಷ್ಟ್ರೀಯ ರೋಮಿಂಗ್ನ ಪ್ರಯೋಜನವನ್ನು ಕೂಡ ಗ್ರಾಹಕರು ಈ ರಿಚಾರ್ಜ್ ಪ್ಲಾನ್ ನಿಂದ ಪಡೆಯುತ್ತಾರೆ.
ಇದಿಷ್ಟೇ ಅಲ್ಲ, ಬಿಎಸ್ ಎನ್ ಎಲ್ ತನ್ನ ಎಲ್ಲ ಮೊಬೈಲ್ ಬಳಕೆದಾರರಿಗೆ BiTVಗೆ ಪ್ರವೇಶವನ್ನು ಉಚಿತವಾಗಿ ನೀಡುತ್ತಿದೆ. ಬಳಕೆದಾರರು 350ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್ಗಳು ಮತ್ತು OTT ಅಪ್ಲಿಕೇಶನ್ ಗಳಿಗೆ ಪ್ರವೇಶ ಪಡೆಯುತ್ತಾರೆ. ಇದು ಮಾತ್ರವಲ್ಲದೆ ಕಂಪನಿಯು ಇತ್ತೀಚೆಗೆ BiTVಯ ಪ್ರೀಮಿಯಂ ಯೋಜನೆಯನ್ನ ಕೂಡ ಪರಿಚಯಿಸಿದೆ. 151 ರೂ. ಯೋಜನೆಯಲ್ಲಿ ಬಳಕೆದಾರರಿಗೆ 450ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್ ಗಳು, 23ಕ್ಕೂ ಹೆಚ್ಚು OTT ಅಪ್ಲಿಕೇಶನ್ ಗಳು ಲಭ್ಯ ಇರುತ್ತವೆ.
ಕಳೆದ ಆಗಸ್ಟ್ ನಲ್ಲಿ ಕಂಪನಿಯು ಹೊಸ ಬಳಕೆದಾರರನ್ನು ಸೆಳೆಯಲು 1 ರೂ. ಪ್ಲಾನ್ ಅನ್ನು ಪರಿಚಯಿಸಿತು, 1 ರೂಪಾಯಿ ಪಾವತಿಸಿದರೆ ಸಾಕು, ನಿಮಗೊಂದು ಹೊಸ ಸಿಮ್ ನೀಡಲಾಗುತ್ತದೆ. ಇದು 30 ದಿನಗಳ ವ್ಯಾಲಿಡಿಟಿ, ದೈನಂದಿನ 2 ಜಿಬಿ ಡೇಟಾ, ಅನಿಯಮಿತ ಕರೆ ಮತ್ತು ಉಚಿತ SMSನಂತಹ ಪ್ರಯೋಜನಗಳನ್ನು ನೀಡುತ್ತದೆ. ಕಂಪನಿಯು ಈಗ ಸೆಪ್ಟೆಂಬರ್ 15ರವರೆಗೆ ಯೋಜನೆಯ ಗಡುವು ವಿಸ್ತರಿಸಿದೆ.