ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾಗಿರುವ ಭಾರತ್ ಸಂಚಾರ ನಿಗಮ ಲಿಮಿಟೆಡ್ (BSNL Diwali Offer) ಈಗ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಆಫರ್ ಬಿಡುಗಡೆ ಮಾಡಿದೆ. ಕೇವಲ ಒಂದು ರೂಪಾಯಿ ಪಾವತಿಸಿದರೆ ಸಾಕು, ಇಡೀ ತಿಂಗಳು ಉಚಿತ ಇಂಟರ್ ನೆಟ್, ಅನ್ ಲಿಮಿಟೆಡ್ ಕಾಲ್ ಸೇರಿ ವಿವಿಧ ಸೌಲಭ್ಯಗಳನ್ನು ನೀಡಲಾಗಿದೆ. ಒಂದು ತಿಂಗಳವರೆಗೆ ವಿಶೇಷ ಆಫರ್ ಜಾರಿಯಲ್ಲಿ ಇರಲಿದೆ.
ಹೌದು ಬಿಸ್ಸೆನ್ನೆಲ್ ಆಫರ್ ಕೇವಲ ಹೊಸ ಬಳಕೆದಾರರಿಗೆ ಮಾತ್ರ. ಯಾವುದೇ ಖಾಸಗಿ ಟೆಲಿಕಾಂ ಕಂಪನಿಯ ಚಂದಾದಾರರಾಗಿದ್ದವರು BSNL ನ 4G ನೆಟ್ ವರ್ಕ್ ಗೆ ಸೇರಲು ಬಯಸಿದರೆ, ನೀವು ಈ ಹೊಸ ಕೊಡುಗೆಯ ಮೂಲಕ BSNL ನೆಟ್ವರ್ಕ್ಗೆ ಸೇರಬಹುದು. ಈ ಕೊಡುಗೆ ಸೀಮಿತ ಅವಧಿಗೆ ಮಾತ್ರ. ಈ BSNL ಆಫರ್ ಅಕ್ಟೋಬರ್ 15 ರಂದು ಪ್ರಾರಂಭವಾಗಿದ್ದು, ನವೆಂಬರ್ 15 ರವರೆಗೆ ಚಾಲ್ತಿಯಲ್ಲಿರಲಿದೆ.
ಹೊಸದಾಗಿ ಬಿಎಸ್ಸೆನ್ನೆಲ್ ಸಿಮ್ ಖರೀದಿಸುವವರು ಕೂಡ ಕೇವಲ ಒಂದು ರೂಪಾಯಿಗೆ ಅನಿಯಮಿತ ಕರೆಗಳು, ದಿನಕ್ಕೆ 2GB ಡೇಟಾ ಮತ್ತು 100 SMS ಸಂದೇಶಗಳನ್ನು ಪಡೆಯಬಹುದು. ಕಂಪನಿಯ ಪ್ರಕಾರ, ಸಿಮ್ ಅನ್ನು ಉಚಿತವಾಗಿ ನೀಡುತ್ತಿದೆ. ನೀವು ಅದನ್ನು ಕೇವಲ ಒಂದು ರೂಪಾಯಿಗೆ ಖರೀದಿಸಬಹುದು ಎಂದು ಕಂಪನಿಯು ಮಾಹಿತಿ ನೀಡಿದೆ. ಒಂದು ತಿಂಗಳ ನಂತರ ನೀವು ನಿಮಗೆ ಬೇಕಾದ ಪ್ಯಾಕೇಜ್ ಅನ್ನು ರಿಚಾರ್ಜ್ ಮಾಡಿಸಿಕೊಳ್ಳಬಹುದು.
ಇತ್ತೀಚೆಗೆ ಬಿಎಸ್ಸೆನ್ನೆಲ್ ಬದಲಾವಣೆಗೆ ಒಗ್ಗಿಕೊಳ್ಳುತ್ತಿದೆ. ಖಾಸಗಿ ಕಂಪನಿಗಳಿಗೆ ಸ್ಪರ್ಧೆಯೊಡ್ಡುವ ರೀತಿ ಸೇವೆಗಳನ್ನು ನೀಡುತ್ತಿದೆ. ದೇಶಾದ್ಯಂತ 4ಜಿ ವ್ಯವಸ್ಥೆಗೆ ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ಸುಮಾರು 98 ಸಾವಿರ 4ಜಿ ಟವರ್ ಗಳನ್ನು ಕೆಲ ದಿನಗಳ ಹಿಂದಷ್ಟೇ ಲೋಕಾರ್ಪಣೆ ಮಾಡಲಾಗಿತ್ತು. ಇನ್ನೂ 1 ಲಕ್ಷ ಟವರ್ ಗಳನ್ನು ಸ್ಥಾಪಿಸುವ ಗುರಿಯನ್ನು ಬಿಎಸ್ಸೆನ್ನೆಲ್ ಹೊಂದಿದೆ.