ಬೆಂಗಳೂರು: ಬೆಂಗಳೂರಿನ ರಾಮಮೂರ್ತಿ ನಗರ ವ್ಯಾಪ್ತಿಯ ಟಿ.ಸಿ. ಪಾಳ್ಯ ಮುಖ್ಯ ರಸ್ತೆಯಲ್ಲಿ ನಸುಕಿನ ಜಾವ ಯುವಕನನ್ನು ಮಾರಕಾಸ್ತ್ರದಿಂದ ಹೊಡೆದು ಹತ್ಯೆಗೈದಿರುವ ಘಟನೆ ನಡೆದಿದೆ. ಕಿರಣ್ (27) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಮಾಹಿತಿ ಪ್ರಕಾರ, ಬೆಳಗ್ಗೆ ಸುಮಾರು 4 ರಿಂದ 4:30ರ ನಡುವೆ ಈ ಘಟನೆ ನಡೆದಿದ್ದು, ಆಟೋದಲ್ಲಿ ಬಂದಿದ್ದ ವ್ಯಕ್ತಿಯು ಮಾರಕಾಸ್ತ್ರಗಳಿಂದ ಕಿರಣ್ ಮೇಲೆ ದಾಳಿ ನಡೆಸಿದ್ದಾನೆ. ದಾಳಿಯ ವೇಳೆ ತಲೆಗೆ ಗಂಭೀರವಾಗಿ ಹೊಡೆದ ಪರಿಣಾಮ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಳೆ ದ್ವೇಷದಿಂದ ಕೊಲೆ ಮಾಡಿರುವುದೆಂಬ ಶಂಕೆ ವ್ಯಕ್ತವಾಗಿದೆ. ಮೃತ ಕಿರಣ್ ಮೂಲತಃ ಕೆ.ಆರ್.ಪುರಂ ಭಾಗದ ನಿವಾಸಿಯಾಗಿದ್ದು, ಅವನಿಗೆ ಅಪರಾಧ ಪ್ರಕರಣಗಳ ಹಿನ್ನಲೆ ಇದ್ದುದಾಗಿ ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದು ತಕ್ಷಣವೇ ರಾಮಮೂರ್ತಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಎರಡು ವಿಶೇಷ ತಂಡಗಳನ್ನು ರಚಿಸಿ ತನಿಖೆ ಮುಂದುವರಿಸಿದ್ದಾರೆ. ಹತ್ಯೆಗೆ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದುಬರಬೇಕಿದೆ.
ಇದನ್ನೂ ಓದಿ : ಟಿಟಿ ವಾಹನಕ್ಕೆ ಲಾರಿ ಡಿಕ್ಕಿ : ಕಾಶಿಗೆ ಹೊರಟಿದ್ದ ಮೂವರು ಮಹಿಳೆಯರು ದಾರುಣ ಸಾವು


















